ಮತ್ತಿಗಟ್ಟಿ ನಿಧನ
ಧಾರವಾಡ: ಜೈಪುರ ಘರಾಣೆಯ ಅತ್ಯಮೂಲ್ಯ ನಿಧಿ ಎಂದೇ ಖ್ಯಾತರಾಗಿದ್ದ ಹಿರಿಯ ಸಂಗೀತಗಾರ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ (86) ಶುಕ್ರವಾರ ಸಂಜೆ 4ಕ್ಕೆ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಪಂಚಾಕ್ಷರಿಸ್ವಾಮಿ ಅವರನ್ನು ಗುರುವಾರವಷ್ಟೇ ಅಪಾರ ಶಿಷ್ಯ ಬಳಗದ ವತಿಯಿಂದ ಧಾರವಾಡದಲ್ಲಿ ಅದ್ಧೂರಿಯಾಗಿ ಅಭಿನಂದಿಸಲಾಗಿತ್ತು. ಇವರು ಮೂಲತಃ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯವರು. ಇಲ್ಲಿನ ಚನ್ನಬಸವೇಶ್ವರ ನಗರದಲ್ಲಿ ವಾಸವಿದ್ದ ಪಂ. ಪಂಚಾಕ್ಷರಿಸ್ವಾಮಿ ಸದ್ಯ ತಮ್ಮ ಗಾಯನ ನಿಲ್ಲಿಸಿದ್ದು, ಪತ್ನಿ ಶಾಂತಮ್ಮ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಕಿರಾಣಾ-ಘರಣಾ, ಗ್ವಾಲಿಯರ್ ಹಾಗೂ ಜೈಪುರ ಅತ್ರೋಲಿಯಲ್ಲಿ ಇವರು ಪರಿಣಿತರಾಗಿದ್ದರು. ರಂಗಭೂಮಿ ನಟ ಹಾಗೂ ಗಾಯಕರಾಗಿಯೂ ಪ್ರಸಿದ್ಧಿ ಹೊಂದಿದ್ದರು. ಪಂ. ಪಂಚಾಕ್ಷರಿ ಗವಾಯಿ, ಪಂ. ಮಲ್ಲಿಕಾರ್ಜುನ ಮನ್ಸೂರ ಅವರ ಪ್ರಮುಖ ಶಿಷ್ಯರಲ್ಲಿ ಇವರೂ ಒಬ್ಬರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸಂಗೀತ ಉಪನ್ಯಾಸಕರಾಗಿ ಸುಮಾರು 12 ವರ್ಷ ಸೇವೆ ಸಲ್ಲಿಸಿದ್ದಾರೆ. 1953ರಿಂದ ಆಕಾಶವಾಣಿ 'ಎ' ಶ್ರೇಣಿಯ ಕಲಾವಿದರಾಗಿದ್ದು, ದೇಶ-ವಿದೇಶಗಳಲ್ಲಿ ತಮ್ಮ ಗಾಯನ ಪ್ರಸ್ತುತ ಪಡಿಸಿದ್ದಾರೆ.
ಸನ್ಮಾನಗಳು: ಇವರ ಸಂಗೀತ ಸಾಧನೆಗೆ ರಾಜ್ಯೋತ್ಸವ, ಕನಕ ಪುರಂದರ, ಪಂಚಾಕ್ಷರ ಸಮ್ಮಾನ, ಪುಟ್ಟರಾಜ ಸಮ್ಮಾನ, ಗಾನ ಪ್ರವೀಣ, ದೂರದರ್ಶನದ ಚಂದನಶ್ರೀ, ಮೈಸೂರಿನ ಅಸ್ಥಾನ ವಿದ್ವಾನ ಪ್ರಶಸ್ತಿಗಳು ಸಂದಿವೆ. ಹಾಗೆಯೇ, ಷಡಕ್ಷರಿ ಬುವಾ ಯತ್ನಳ್ಳಿ, ಸರಯು ಸೊನ್ನ, ಉಷಾ ಕುಲಕರ್ಣಿ, ಜಯದೇವಿ ಜಂಗಮಶೆಟ್ಟಿ ಅಂತಹ ಹತ್ತಾರು ಶಿಷ್ಯ ವರ್ಗವನ್ನು ಕೊಡುಗೆಯಾಗಿ ನೀಡಿದ್ದಾರೆ.ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ಮತ್ತಿಗಟ್ಟಿಯಲ್ಲಿ ನಡೆಯಲಿದೆ.