ಕುವೆಂಪು ಮಾದರಿ ಶಾಲೆ ನಿರ್ಲಕ್ಷ್ಯ
ಉಪ್ಪಿನ ಬೆಟಗೇರಿ (ಧಾರವಾಡ): ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ ನಿರ್ಮಾಣಗೊಂಡ ಧಾರವಾಡದ ಏಕೈಕ ಕುವೆಂಪು ಮಾದರಿ ಶಾಲೆ ನಿರ್ಲಕ್ಷ್ಯದ ನೆರಳಿನಲ್ಲಿ ದಿನ ದೂಡುತ್ತಿದೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲೆಂಬ ಉದ್ದೇಶದಿಂದ 2005ರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೊಂದು ಈ ಮಾದರಿ ಶಾಲೆಗಳನ್ನು ನಿರ್ಮಿಸಲಾಗಿತ್ತು. ಅಂತೆಯೇ, ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿರುವ ಈ ಮಾದರಿ ಶಾಲೆ ಸ್ಥಿತಿ ಗಮನಿಸಿದರೆ ಮಾದರಿ ಶಾಲೆಯ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ.
ವೃತ್ತಿ ಕೌಶಲ್ಯ ತರಬೇತಿ, ಸಂಗೀತ ಶಿಕ್ಷಣ, ಕಂಪ್ಯೂಟರ್ ತರಬೇತಿ, ಪ್ರಯೋಗಾಲಯ, ಗ್ರಂಥಾಲಯ ಹೀಗೆ ಕಾನ್ವೆಂಟ್ ಶಾಲೆಯಲ್ಲೂ ದೊರೆಯದ ಸೌಲಭ್ಯಗಳನ್ನು ಈ ಸರ್ಕಾರಿ ಮಾದರಿ ಶಾಲೆಗೆ ನೀಡಲಾಗಿತ್ತು. ಆರಂಭದ ಎರಡ್ಮೂರು ವರ್ಷ ಆರಂಭ ಶೂರತ್ವ ತೋರಿದ ಶಾಲೆ ಇತ್ತೀಚಿನ ವರ್ಷಗಳಲ್ಲಿ ಅಧೋಗತಿಗೆ ಇಳಿಯುತ್ತಿದೆ. ಅನುದಾನದ ಕೊರತೆಯಿಂದ ಕುವೆಂಪು ಮಾದರಿ ಶಾಲೆ ತನ್ನ ಮೂಲ ಉದ್ದೇಶಗಳನ್ನು ಮರೆತಿದೆ.
ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಿಲ್ಲೆಗೆ ದೊರೆತ ಏಕೈಕ ಮಾದರಿ ಶಾಲೆ ದಿನದಿಂದ ದಿನಕ್ಕೆ ಸೊರಗುತ್ತಿದೆ. ವೃತ್ತಿ ಕೌಶಲ್ಯ ಕಲಿಸುವ ಉಪಕರಣಗಳು (ಹೊಲಿಗೆ ಯಂತ್ರ) ಧೂಳು ತಿನ್ನುತ್ತಿವೆ. ಸಂಗೀತ ಹಾಗೂ ಕಂಪ್ಯೂಟರ್ ಶಿಕ್ಷಕರಿಲ್ಲದೇ ಸಂಗೀತದ ಉಪಕರಣಗಳು (ತಬಲಾ, ಮೃದಂಗ, ಗಿಟಾರ್, ವೈಯಲಿನ್, ಹಾರ್ಮೋನಿಯಂ) ಹಾಗೂ ಕಂಪ್ಯೂಟರ್ ಉಪಯೋಗಿಸದೇ ಹಾಳಾಗುತ್ತಿವೆ. ಮಳೆಗಾಲ ಬಂದರೆ ಸೋರುವ ಶಾಲೆ ಕಟ್ಟಡ, ಇದು ಮಾದರಿ ಶಾಲೆಯ ಸ್ಥಿತಿ.
ಎಳ್ಳುನೀರು: ವಿಶಾಲವಾದ ಆಟದ ಮೈದಾನವಿದ್ದರೂ ಸಮತಟ್ಟಾಗಿರದೇ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗೆ ತಡೆ ಉಂಟಾಗಿದೆ. ಇನ್ನು ಮಳೆಗಾಲದಲ್ಲಂತೂ ಮೈದಾನ ಜಲಾವೃತವಾಗುವುದರಿಂದ ವಿದ್ಯಾರ್ಥಿಗಳು ಗೋಳಾಡುವಂತಾಗಿದೆ. ಶೌಚಾಲಯಕ್ಕೆ ನೀರಿನ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತೊಂದರೆ ಅನುಭವಿಸಬೇಕಾಗಿದೆ. ಯಾವ ಉದ್ದೇಶಗಳನ್ನಿಟ್ಟು ಸರ್ಕಾರ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಗಳನ್ನು ಪ್ರಾರಂಭಿಸಿತೋ ಆ ಉದ್ದೇಶ ಹಾಗೂ ಆಶಯಕ್ಕೆ ಸರ್ಕಾರವೇ ಎಳ್ಳು ನೀರು ಬಿಟ್ಟಂತಾಗಿರುವುದು ಸೋಜಿಗದ ಸಂಗತಿ.
ಯಾವಾಗ ಪ್ರತಿಮೆ ಅನಾವರಣ: ರಾಷ್ಟ್ರಕವಿ ಕುವೆಂಪು ಸವಿನೆನಪಿಗಾಗಿ ಪ್ರಾರಂಭವಾದ ಈ ಶಾಲೆ ಕಾರ್ಯಾರಂಭ ಮಾಡಿ ಎಂಟು ವರ್ಷಗಳು ಕಳೆದರೂ ಕುವೆಂಪು ಪ್ರತಿಮೆ ಇನ್ನೂ ಅನಾವರಣಗೊಂಡಿಲ್ಲ. ಶಿಕ್ಷಣ ಇಲಾಖೆ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೋಣೆಯೊಂದರಲ್ಲಿ ಪ್ರತಿಮೆ ಧೂಳು ತಿನ್ನುತ್ತಿದೆ.
ಶಾಲಾ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕುವೆಂಪು ಸಭಾ ಭವನದ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡು ಮೂರು ವರ್ಷಗಳೇ ಕಳೆದಿವೆ. ಇದಕ್ಕಿಂತ ಹೆಚ್ಚಾಗಿ ಈ ಮಾದರಿ ಶಾಲೆ ಬರೀ ಕಲ್ಲೂರು ಗ್ರಾಮಕ್ಕೆ ಮಾತ್ರ ಸೀಮಿತವಲ್ಲ. ಇಡೀ ಜಿಲ್ಲೆಗೆ ಸಂಬಂಧಿಸಿದ್ದಾದರೂ ಇಲ್ಲಿನ ಸ್ಥಿತಿ ಕಂಡು ಬೇರೆ ಊರಿನ ವಿದ್ಯಾರ್ಥಿಗಳು ಈ ಮಾದರಿ ಶಾಲೆಗೆ ಬರಲು ಮನಸ್ಸು ಮಾಡುತ್ತಿಲ್ಲ.
-ಪ್ರಕಾಶ ಹೂಗಾರ