ಕೆಜೆಪಿ ಬಲಗೊಳ್ಳುವುದು ಅನುಮಾನ: ನಿಂಬಣ್ಣವರ
ಹುಬ್ಬಳ್ಳಿ: ಕರ್ನಾಟಕ ಜನತಾ ಪಕ್ಷ ರಾಜ್ಯದಲ್ಲಿ ಬಲಗೊಳ್ಳುತ್ತದೆ ಎಂಬ ಯಾವ ನಿರೀಕ್ಷೆಯೂ ಇಲ್ಲ. ಹೀಗಾಗಿ ರಾಜ್ಯದ ಹಿತ ಕಾಪಾಡಲು ಕೆಜೆಪಿಯಿಂದಾಗದು. ಈ ನಿಟ್ಟಿನಲ್ಲಿ ತಾವು ತಮ್ಮ ರಾಜಕೀಯ ಭವಿಷ್ಯ ಹಾಗೂ ಕ್ಷೇತ್ರದ ಹಿತ ದೃಷ್ಟಿಯಿಂದ ಕೆಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುತ್ತಿರುವುದಾಗಿ ಕೆಜೆಪಿ ಮುಖಂಡ ಸಿ.ಎಂ. ನಿಂಬಣ್ಣವರ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿ ಸಂಘಟನೆ ಬಲಗೊಳ್ಳದಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ತಮ್ಮ ಬೆಂಬಲಿಗರು ಅಧೈರ್ಯಗೊಂಡಿದ್ದಾರೆ. ಪ್ರಸ್ತುತ ವಿದ್ಯಮಾನ ಗಮನಿಸಿದರೆ ಕೆಜೆಪಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸ್ವತಃ ಯಡಿಯೂರಪ್ಪನವರೂ ಆಸಕ್ತಿ ತೋರುತ್ತಿಲ್ಲ. ಹೀಗಿರುವಾಗ ತಾವು ಈ ಹಿಂದೆ 17 ವರ್ಷ ಕಾಲ ಕಟ್ಟಿ ಬೆಳೆಸಿದ್ದ ಬಿಜೆಪಿ ಮರು ಸೇರ್ಪಡೆಗೆ ನಿರ್ಧರಿಸಿದ್ದಾಗಿ ತಿಳಿಸಿದರು. ತಾವು ಕೆಜೆಪಿ ತೊರೆಯುವುದಕ್ಕೂ ಮುನ್ನ ಮತದಾರರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬಹುಪಾಲು ಜನ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತಾವು ಅ. 12ರಂದು ಕಲಘಟಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ. ತಮ್ಮೊಂದಿಗೆ ನೂರಾರು ಮುಖಂಡರು ಕೆಜೆಪಿ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಕಲಘಟಗಿ ಮತಕ್ಷೇತ್ರದ ಕೆಜೆಪಿ ಘಟಕದಲ್ಲಿ ಒಬ್ಬನೇ ಒಬ್ಬ ಕಾರ್ಯಕರ್ತ ಇರುವುದಿಲ್ಲ ಎಂದರು. ಬಿಜೆಪಿ ತೊರೆದು ಕೆಜೆಪಿ ಸೇರುವ ಸಂದರ್ಭದಲ್ಲಿ ತಾವು ಬಿಜೆಪಿಯ ಕೆಲ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದು ನಿಜ. ಆಗಿನ ರಾಜಕೀಯ ಬೆಳವಣಿಗೆ ಹಾಗಿತ್ತು. ಈಗಲೂ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದಲ್ಲಿಯೂ ನ್ಯೂನತೆ ಇದೆ. ಆದಾಗ್ಯೂ ಬಿಜೆಪಿ ಎಲ್ಲಕ್ಕಿಂತ ಒಳಿತು ಎಂದು ಅಭಿಪ್ರಾಯ ಪಟ್ಟರು. ಕೆಜೆಪಿ ಸಂಸ್ಥಾಪಕ ಬಿ.ಎಸ್. ಯಡಿಯೂರಪ್ಪನವರು ತಮ್ಮನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ನನಗೆ ಯಾವಾಗಲೂ ಅವರು ಗುರುವಿನ ಸಮಾನ. ಹೀಗಿದ್ದಾಗ್ಯೂ ತಾವು ಕ್ಷೇತ್ರದ ಹಿತದೃಷ್ಟಿಯಿಂದ ಅವರ ರಾಜಕೀಯ ಸಖ್ಯ ಬಿಟ್ಟು ದೂರು ಸರಿಯುತ್ತಿದ್ದೇವೆ. ಅವರೂ ಸಹ ಆದಷ್ಟು ಬೇಗನೆ ಬಿಜೆಪಿ ಸೇರುತ್ತಾರೆಂಬ ವಿಶ್ವಾಸವಿದೆ. ತಾವು ಕೆಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಪತ್ರ ಈಗಾಗಲೇ ಯಡಿಯೂರಪ್ಪನವರಿಗೆ ಈಗಾಗಲೇ ಸಲ್ಲಿದ್ದೇವೆ ಎಂದ ನಿಂಬಣ್ಣವರ ಯಾವುದೇ ಆಮಿಷಕ್ಕೆ ಒಳಗಾಗಿ ಬಿಜೆಪಿ ಸೇರುತ್ತಿಲ್ಲ ಎಂದು ಹೇಳಿದರು. ಮುಖಂಡರಾದ ಸದಾನಂದ, ಶಂಕರ ಬಸವರಡ್ಡಿ, ಲಿಂಗರಾಜ ತಿರ್ಲಾಪುರ, ಐ.ಸಿ. ಗೋಕುಲ ಗೋಷ್ಠಿಯಲ್ಲಿದ್ದರು.
ಅರ್ಜಿ ಆಹ್ವಾನ
ಧಾರವಾಡ: ಬಿಜಾಪುರ ಸೈನಿಕ ಶಾಲೆ 6, 9ನೇ ತರಗತಿಗೆ 2013-14ನೇ ಸಾಲಿನ ಪ್ರವೇಶಕ್ಕಾಗಿ ಪ್ರವೇಶ ಪೂರ್ವ ಪರೀಕ್ಷೆ ಜನವರಿ 5ರಂದು ನಡೆಯಲಿವೆ. 6ನೇ ತರಗತಿಗೆ ಧಾರವಾಡ, ಗುಲ್ಬರ್ಗ, ಬೆಳಗಾವಿ, ಬೆಂಗಳೂರು, 6, 9ನೇ ತರಗತಿಗಳಿಗೆ ಬಿಜಾಪುರದಲ್ಲಿ ಈ ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಡಿ. 10 ಕೊನೆ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.