ಪಂಚಾಕ್ಷರಿಸ್ವಾಮಿ ಸ್ಮಾರಕ ಭವನ ನಿರ್ಮಾಣ: ಶಿವಳ್ಳಿ
ಧಾರವಾಡ: ಖ್ಯಾತ ಹಿಂದುಸ್ತಾನಿ ಸಂಗೀತಗಾರರಾಗಿದ್ದ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಹುಟ್ಟೂರು ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಸ್ಮಾರಕ ಭವನ ನಿರ್ಮಿಸುವುದಾಗಿ ಶಾಸಕ ಸಿ.ಎಸ್. ಶಿವಳ್ಳಿ ಭರವಸೆ ನೀಡಿದ್ದಾರೆ. ಪಂಚಾಕ್ಷರಿಸ್ವಾಮಿ ಅವರ ಅಂತ್ಯಕ್ರಿಯೆ ಮತ್ತಿಗಟ್ಟಿಯಲ್ಲಿ ಶನಿವಾರ ನಡೆದಿದ್ದು, ಈ ಸಂದರ್ಭ ಶಾಸಕ ಶಿವಳ್ಳಿ ಮಾತನಾಡಿ, ಮತ್ತಿಗಟ್ಟಿ ಅವರ ನಿಧನದಿಂದ ನಾಡಿಗೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಹೆಸರು ಶಾಶ್ವತವಾಗಿ ಉಳಿಯಲು ಸ್ಮಾರಕ ಭವನ ನಿರ್ಮಿಸುವುದಲ್ಲದೇ, ಪ್ರತಿವರ್ಷ ಮತ್ತಿಗಟ್ಟಿಯಲ್ಲಿ ಸಂಗೀತೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಗದುಗಿನ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಮ್ಯಾನೇಜರ್ ಬಸವರಾಜ ಶಾಸ್ತ್ರಿ ಹಿಡ್ಕಿಮಠ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಸರೋಜಾ ಪಾಟೀಲ, ಗ್ರಾಪಂ ಅಧ್ಯಕ್ಷ ಬಸವರಾಜ ಅಳಗವಾಡಿ, ವಿಶ್ವನಾಥ ಕುಬಿಹಾಳ, ಮತ್ತಿಗಟ್ಟಿಯವರ ಶಿಷ್ಯರಾದ ಡಾ ಮೃತ್ಯುಂಜಯ ಅಗಡಿ, ಡಾ ವೀರಣ್ಣ ಹೂಗಾರ, ಪ್ರೊ ಉಮೇಶ ಮುನವಳ್ಳಿ, ಪಾಟೀಲ ಕುಲಕರ್ಣಿ ಇದ್ದರು.
ನಾಳೆ ಎಡಪಕ್ಷಗಳ ರ್ಯಾಲಿ
ಹುಬ್ಬಳ್ಳಿ: ದುಡಿಯವ ವರ್ಗದ ಪರವಾಗಿರುವ ಪರ್ಯಾಯ ರಾಜಕೀಯ ವ್ಯವಸ್ಥೆ ಹುಟ್ಟು ಹಾಕುವ ನಿಟ್ಟಿನಲ್ಲಿ ಅ. 8ರಂದು ಬೆಂಗಳೂರಿನಲ್ಲಿ ಎಡಪಕ್ಷಗಳ ರ್ಯಾಲಿಯನ್ನು ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಿಪಿಐ ಪಕ್ಷದ ಲೋಕಸಭಾ ಸದಸ್ಯ ಡಿ. ರಾಜಾ ಮತ್ತು ಸಿಪಿಎಂ ನಾಯಕಿ ಬೃಂದಾ ಕಾರಟ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅ. 8ರಂದು ನಡೆಯಲಿರುವ ರ್ಯಾಲಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುಮಾರು 250 ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಗಂಗೂರ, ಬಿ.ಎ. ಮುಧೋಳ, ಪ್ರಭಾಕರ ಬಿಡ್ನಾಳ, ಶಿವಯೋಗಿ ಪ್ಯಾಟಿಶೆಟ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ.
ಮಾಜಿ ಸೈನಿಕನ ಕೊಲೆ
ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಲ್ಲಿನ ಸಿದ್ಧಾರೂಢ ಮಠದ ಹತ್ತಿರದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಲೆಗಿಡಾದ ವ್ಯಕ್ತಿಯನ್ನು ಶ್ರೀನಿವಾಸ ಕುಲಕರ್ಣಿ(52) ಎಂಬ ಮಾಜಿ ಯೋಧ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ರಾಜು ನಾಯಕ್(32) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಪರಿಚಿತರಾಗಿದ್ದ ಇವರಿಬ್ಬರು ಶನಿವಾರ ರಾತ್ರಿ ರಾಜು ಅವರ ಮನೆಯಲ್ಲಿ ಕಂಠಪೂರ್ತಿ ಸಾರಾಯಿ ಸೇವಿಸಿದ್ದಾರೆ. ಸಾರಾಯಿ ಸೇವನೆ ಮಾಡುತ್ತಿದ್ದ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ಸಿಟ್ಟಿನ ಭರದಲ್ಲಿ ರಾಜು, ಮಾಜಿ ಯೋಧನ ಕೈಕಾಲು ಕಟ್ಟಿ ಹಾಕಿ ತಂತಿಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವದೊಂದಿಗೆ ಇದ್ದ ರಾಜು ನಾಯಕನನ್ನು ಬಂಧಿಸಿದ್ದಾರೆ.
ಇಸ್ಲಾಮಿಕ್ ವಿವಿ ಸ್ಥಾಪನೆಗೆ ಅನುಮತಿ ಬೇಡ
ಹುಬ್ಬಳ್ಳಿ: ಆಂಧ್ರಪ್ರದೇಶದ ತಿರುಪತಿಯಲ್ಲಿ ಹೀರಾ ಇಂಟರ್ನ್ಯಾಷನಲ್ ಇಸ್ಲಾಮಿಕ್ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಭಾನುವಾರ ಹಿಂದು ಜನಜಾಗೃತಿ ಸಮಿತಿ ಸದಸ್ಯರು ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಸನಾತನ ಸಂಸ್ಥೆ ಮತ್ತು ಶ್ರೀರಾಮಸೇನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಹಿಂದುಗಳ ಶ್ರದ್ಧಾಕೇಂದ್ರವಾಗಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಸಮೀಪ ಇರುವ ಚಂದ್ರಗಿರಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ. ತೀರ್ಥ ಕ್ಷೇತ್ರದ ಪಾವಿತ್ರ್ಯ ರಕ್ಷಣೆ ಗಮನದಲ್ಲಿರಿಸಿಕೊಂಡು ಇಸ್ಲಾಮಿಕ್ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ನೀಡಬಾರದು ಹಿಂದು ಜನಜಾಗೃತಿ ಸದಸ್ಯರು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿರುವ ಪರಿಸರ ತಿರುಪತಿ ನಗರ ವಿಕಾಸ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಐದು ಅಂತಸ್ತಿಗಿಂತ ಮೇಲ್ಪಟ್ಟು ಕಟ್ಟಡ ನಿರ್ಮಿಸುವುದಕ್ಕೆ ಕಾನೂನು ಪ್ರಕಾರ ಅನುಮತಿ ಇಲ್ಲ. ತಿರುಪತಿ ಪ್ರದೇಶದಲ್ಲಿ ಮುಸ್ಲಿಂರ ಸಂಖ್ಯೆ ಶೇ. 0.5ರಷ್ಟು ಇದ್ದು, ಅವರಿಗೆ ವಿಶ್ವವಿದ್ಯಾಲಯದ ಅಗತ್ಯ ಏನು? ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರೂ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದ್ದು ಸರಿಯಲ್ಲ ಎಂದು ತಹಸೀಲ್ದಾರ್ ಮುಖಾಂತರ ಪ್ರಧಾನಿಗೆ ಸಲ್ಲಿಸಿರುವ ಮನವಿಯಲ್ಲಿ ಹಿಂದು ಜನಜಾಗೃತಿ ಸದಸ್ಯರು ತಿಳಿಸಿದ್ದಾರೆ.