ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮನೋಹರ ಗ್ರಂಥಮಾಲೆ ಕಾರ್ಯ ಶ್ಲಾಘನೀಯ

Lingaraj Badiger
Updated On : 7 Oct 2013, 11:24 am

ಧಾರವಾಡ: ಮನೋಹರ ಗ್ರಂಥಮಾಲೆಯು ತನ್ನ ಪ್ರಕಾಶನದ ಮೂಲಕ ಹಿರಿಯ ತಲೆಮಾರಿಗೆ ಕೊಟ್ಟಷ್ಟೇ ಮಹತ್ವವನ್ನು, ಕಿರಿಯ ತಲೆಮಾರಿಗೂ ಕೊಟ್ಟು ಕನ್ನಡ ಪುಸ್ತಕದ ಕಣಜ ಶ್ರೀಮಂತ ಮಾಡಿದೆ ಎಂದು ಹಿರಿಯ ವಿಮರ್ಶಕ ಟಿ.ಪಿ. ಅಶೋಕ ಹೇಳಿದರು.
ರಂಗಾಯಣ ಆವರಣದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಭಾನುವಾರ ಮನೋಹರ ಗ್ರಂಥಮಾಲೆಯಿಂದ ಪ್ರಕಾಶಿತ ಜಿ.ಎಸ್. ಆಮೂರರ ಯು.ಆರ್. ಅನಂತಮೂರ್ತಿ-ವೈಚಾರಿಕತೆ ಮತ್ತು ಸಾಹಿತ್ಯ, ರಜನಿ ನರಹಳ್ಳಿಯವರ ಕಾದಂಬರಿ ಆತ್ಮ ವೃತ್ತಾಂತ, ಶ್ರೀನಿವಾಸ ವೈದ್ಯರ ಅನುವಾದಿತ ಕಾದಂಬರಿ ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ, ಪ್ರಕಾಶ ಗರುಡರ ಬೆತ್ತಲಾಟ ನಾಟಕ ಮತ್ತು ಬಸು ಬೇವಿನಗಿಡದ ಅವರ ಕಥಾ ಸಂಕಲನ ಹೊಡಿ ಚಕ್ಕಡಿ ಹಾಗೂ ಬಿಡಿ ಗ್ರಂಥಗಳಾದ ಗಿರಡ್ಡಿ ಗೋವಿಂದರಾಜರ ವಚನ ವಿನ್ಯಾಸ ವಿಮರ್ಶೆ ಹಾಗೂ ಆರ್ಯರಿಂದ ಅನುವಾದಗೊಂಡ ಷಡ್ದರ್ಶನ ಸಮುಚ್ಚಯ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರಕಟಗೊಂಡಿರುವ ಈ ಎಲ್ಲ ಕೃತಿಗಳು ಬರೀ ಸಂಗ್ರಹಯೋಗ್ಯವಷ್ಟೇ ಅಲ್ಲ ಮತ್ತೆ ಓದುವಂತಹವು. ಒಬ್ಬ ಲೇಖಕನ ಕೃತಿಗಳನ್ನು ಅಮೂಲಾಗ್ರವಾಗಿ ಓದಿ ವಿಮರ್ಶಿಸುವ ಆಮೂರರು, ವಚನಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿರುವ ಗಿರಡ್ಡಿಯವರು ನಿಜಕ್ಕೂ ಅಭಿನಂದನಾರ್ಹರು. ಅದೇ ರೀತಿ ಅನುವಾದ ಅಷ್ಟೇನು ಸರಳವಾದುದೇನಲ್ಲ. ಅಂತಹ ಕಠಿಣ ಕೆಲಸವನ್ನು ಯಶಸ್ವಿಯಾಗಿಸಿದ ಆರ್ಯ, ಶ್ರೀನಿವಾಸ ವೈದ್ಯ ಹಾಗೂ ಪ್ರಕಾಶ ಗರುಡರು ಕೂಡ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಬಸು ಬೇವಿನಗಿಡದ ಅವರ ಕತೆಗಳು ಭರವಸೆಯ ಕತೆಗಾರ ಎಂದು ಸಾಬೀತುಪಡಿಸುತ್ತವೆ. ರಜನಿ ನರಹಳ್ಳಿಯವರ ಆತ್ಮ ವೃತ್ತಾಂತ ಕನ್ನಡ ಭಾಷೆಗೆಯೇ ಒಂದು ಅಪರೂಪದ ಕೃತಿ. ಪ್ರಾಣಿ ಮತ್ತು ಮಾನವ ಸಂಬಂಧಗಳನ್ನು ಎಳೆ-ಎಳೆಯಾಗಿ ಬಿಡಿಸಿಡುತ್ತದೆ. ಓದಲೇಬೇಕಾದ ಕೃತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ಮನೋಹರ ಗ್ರಂಥಮಾಲೆಯ ಒಟ್ಟಿಗೆ ನಮ್ಮ ಬೆಳವಣಿಗೆ. ಮೊದಲು ಇದೊಂದು ಕೋಮುಸಂಸ್ಥೆ ಎಂಬ ಕಲ್ಪನೆ ಇತ್ತು. ಆದರೆ, ಎತ್ತರ ಬೆಳೆಯುತ್ತ ತನ್ನ ವಿಶಾಲತೆ ಮೆರೆಯುತ್ತಲೇ ಹೋಯಿತು. ಜಗಳವಾಡಿದ ನಾವು ಸಣ್ಣವರಾದೆವು ಎಂದರು.
ಡಾ೤ ರಮಾಕಾಂತ ಜೋಶಿ ಸ್ವಾಗತಿಸಿದರು. ರಾಜ್ಯ ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ ಹೊಸೂರ, ಜಿ.ಸಿ. ತಲ್ಲೂರ, ದುಷ್ಯಂತ ನಾಡಗೌಡ, ಡಾ೤ ನರಹಳ್ಳಿ ಬಾಲಸುಬ್ರಹ್ಮಣ್ಯ, ರಾಘವೇಂದ್ರ ಪಾಟೀಲ, ಕೆ.ಎಚ್. ಚನ್ನೂರ, ಬಾಳಣ್ಣ ಸೀಗಿಹಳ್ಳಿ, ಹೇಮಾ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ಆರಾಧ್ಯ, ರಮೇಶ ಪರ್ವತಿಕರ, ಬಿ. ಸುಕನ್ಯಾ, ಹರ್ಷ ಡಂಬಳ, ನರಸಿಂಹ ಪರಾಂಜಪೆ, ಮದನಮೋಹನ ತಾವರಗೇರಿ, ಶಶಿಧರ ನರೇಂದ್ರ, ಅನೀಲ ದೇಸಾಯಿ, ವೆಂಕಟೇಶ ದೇಸಾಯಿ, ಎಸ್.ಎನ್. ದೇಶಪಾಂಡೆ, ಅರವಿಂದ ಕುಲಕರ್ಣಿ, ಸಮೀರ ಜೋಶಿ ಇದ್ದರು. ಡಾ೤ ಹ.ವೆಂ. ಕಾಖಂಡಿಕಿ ನಿರೂಪಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement