ಸ್ವಾಮೀಜಿಗಳ ಧೋರಣೆಗೆ ಆಕ್ಷೇಪ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 6
ಅಮೆರಿಕದ ಡಿವೈನ್ ಹ್ಯಾಂಡ್ ಇಂಟರ್ನ್ಯಾಷನ್ ಯೂನಿವರ್ಸಿಟಿ, ಡಾ. ಮಾತೆ ಮಹಾದೇವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವಿವಾದದ ಚರ್ಚಾ ವೇದಿಕೆಯಾಗಿ ಪರಿಣಮಿಸಿತ್ತು. ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ಬಸವರಾಜ ಹೊರಟ್ಟಿ ಸ್ವಾಮೀಜಿಗಳ ಧೋರಣೆಗೆ ವಿರೋಧ ವ್ಯಕ್ತಪಡಿಸಿದರೆ, ಮಾತೆ ಮಹಾದೇವಿ, ಅಡ್ಡಪಲ್ಲಕ್ಕಿ ಲಿಂಗಾಯತ ಧರ್ಮಕ್ಕೆ ವಿರೋಧವಾದದ್ದು ಎಂದು ಕಿಡಿಕಾರಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭಕ್ಕೆ ತಡವಾಗಿ ಬಂದರೂ ಇಡೀ ಸಭೆಯ ಗಮನ ಸೆಳೆದಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಬಸವರಾಜ ಹೊರಟ್ಟಿ ಮತ್ತು ಕಾರ್ಯಕ್ರಮದ ಕೇಂದ್ರಬಿಂದು ಡಾ. ಮಾತೆ ಮಹಾದೇವಿ.
ಮೊದಲು ಮಾತಿಗೆ ನಿಂತ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಭಕ್ತರಲ್ಲಿ ಆ ಸ್ವಾಮೀಜಿ ಈ ಸ್ವಾಮೀಜಿ ಎಂಬ ಬೇಧ ಇಲ್ಲ. ಭಕ್ತರು ಒಗ್ಗಟ್ಟಾಗಿದ್ದಾರೆ. ಆದರೆ, ಸ್ವಾಮೀಜಿಗಳೇ ಕಿತ್ತಾಟದಲ್ಲಿ ಕಳೆದು ಹೋಗಿದ್ದಾರೆ. ಒಗ್ಗಟ್ಟಿನಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಮಾಧ್ಯಮಗಳ ಮುಖಾಂತರ ಹೇಳಿಕೆ ನೀಡಿ ಇಡೀ ಸಮಾಜವನ್ನು ಕವಲು ದಾರಿಗೆ ತಂದು ನಿಲ್ಲಿಸುತ್ತಿರುವುದು ಸ್ವಾಮೀಜಿಗಳೇ ವಿನಃ ರಾಜಕಾರಣಿಗಳಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ವೇದಿಕೆಯಿಂದ ಇಳಿದು ಹೋಗುತ್ತಿದ್ದಂತೆಯೇ ನೇರಾನೇರ ಮಾತಿಗೆ ಇಳಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, ಈ ವೇದಿಕೆ ಮೇಲೆ ಕಾಂಗ್ರೆಸ್ನವರು ಇದ್ದಾರೆ. ಬಿಜೆಪಿಯವರು ಇದ್ದಾರೆ. ಜೆಡಿಎಸ್ನವರು ಇದ್ದಾರೆ. ಈ ರೀತಿ ಒಂದೇ ಸಮಾಜದ ಸ್ವಾಮೀಜಿಗಳು ಕುಳಿತುಕೊಳ್ಳಲು ಸಾಧ್ಯವಾ ಎಂದು ಯೋಚಿಸಿ? ಎಂದು ಪ್ರಶ್ನೆ ಹಾಕಿದರು. ವಿಧಾನಸಭೆಯಲ್ಲಿ, ಚುನಾವಣೆಯಲ್ಲಿ ಆರೋಪ ಪ್ರತ್ಯಾರೋಪ ಮಾಡುವ ರಾಜಕಾರಣಿಗಳು ಸಮಾಜದ ಕಳಕಳಿ ವಿಚಾರ ಬಂದರೆ ಒಗ್ಗಟ್ಟಾಗುತ್ತೇವೆ.
ಸ್ವಾಮೀಜಿಗಳ ನಡುವೆ ರಾಜಕಾರಣಿಗಳಿಗಿಂತ ಹೆಚ್ಚು ರಾಜಕಾರಣ ಬೆಳೆದಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ. ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಸ್ವಾಮೀಜಿಗಳು ಒಗಟ್ಟಿನಿಂದ ಇದ್ದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಸಾಮಾಜಿಕ ಬದ್ಧತೆ ವಿಚಾರದಲ್ಲಿ ಕನಿಷ್ಠ ರಾಜಕಾರಣಿಗಳಿಂದಾದರೂ ಕಲಿಯುವ ಪ್ರಯತ್ನ ಸ್ವಾಮೀಜಿಗಳಿಂದ ಆಗಬೇಕಿದೆ. ಭಕ್ತರಿಗಾಗಿ ಸ್ವಾಮೀಜಿಗಳು ಇರುತ್ತಾರೋ ವಿನಃ ಸ್ವಾಮೀಜಿಗಳಿಗಾಗಿ ಭಕ್ತರು ಇರುವುದಿಲ್ಲ. ಒಂದು ಹಂತದ ವರೆಗೆ ಮಾತ್ರ ಭಕ್ತರು ಸ್ವಾಮೀಜಿಗಳ ಮೇಲೆ ವಿಶ್ವಾಸವಿರಿಸಬಹುದು ಎಂದು ಹೇಳಿದರು.
ಇವರೆಲ್ಲರ ಮಾತಿನ ನಂತರ ಮಾತನಾಡಿದ ಡಾ. ಮಾತೆ ಮಹಾದೇವಿ, ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಆಚರಣೆ ವೀರಶೈವರಲ್ಲಿದೆ. ಇಳಕಲ್ನ ಚಿತ್ತರಗಿ ಸಂಸ್ಥಾನದ ಶ್ರೀಗಳು ಮತ್ತು ಗದುಗಿನ ತೋಂಟದಾರ್ಯ ಶ್ರೀಗಳು ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿರುವ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರೆ ಎಳೆದಿದ್ದಾರೆ. ಆದರೆ, ರಂಭಾಪುರಿ ಶ್ರೀಗಳು ಮಾತ್ರ ಈ ಪರಂಪರೆ ಬೆಳೆಸಿಕೊಂಡು ಬರುತ್ತಿದ್ದಾರೆ.
ಲಿಂಗಾಯತರೇ ಬೇರೆ ವೀರಶೈವರೇ ಬೇರೆ ಎಂದು ಪ್ರತಿಪಾದಿಸಿದ ಅವರು, ಸಪ್ತಶೈವ ಪಂಥಗಳಲ್ಲಿ ವೀರಶೈವ ಪಂಥವೂ ಒಂದು. ಇಡೀ ಲಿಂಗಾಯತ ಧರ್ಮವನ್ನು ವೀರಶೈವ ಎಂದು ಕರೆಯುವುದು ತಪ್ಪು, ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಬೇಕಿದ್ದರೆ ವೀರಶೈವ ಅನುಯಾಯಿಗಳು ವೀರಶೈವ ಲಿಂಗಾಯತ ಎಂದು ಕರೆದುಕೊಳ್ಳಬಹುದು ಎಂದು ಹೇಳಿದರು.