ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆಯಿಂದ ಅಂತಿಮ ಹಣಾಹಣಿ ಶುರು

Lingaraj Badiger
Updated On : 8 Oct 2013, 11:16 am

ಹುಬ್ಬಳ್ಳಿ: ಟೀಂ ಇಂಡಿಯಾ ಎ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಅ. 9ರಿಂದ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯ ವೀಕ್ಷಣೆ ಮುಕ್ತವಿದ್ದು, ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆಎಸ್‌ಸಿಎ ಧಾರವಾಡ ವಲಯ ಚೇರ್‌ಮನ್ ವೀರಣ್ಣ ಸವಡಿ ಹೇಳಿದರು.
ಸೋಮವಾರ ಕೆಎಸ್‌ಸಿಎ ಮೈದಾನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ರಣಜಿ ಪಂದ್ಯ ಆಯೋಜಿಸಿದ್ದ ವೇಳೆ 8-10 ಸಾವಿರ ಪ್ರೇಕ್ಷಕರು ಕ್ರಿಕೆಟ್ ವೀಕ್ಷಿಸುವುದಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯವನ್ನು 15 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಅ. 9ರಿಂದ ಆರಂಭವಾಗಲಿರುವ ಅಂತಿಮ ಪಂದ್ಯದ ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ, ಹೋಮಗಾರ್ಡ್ ಮತ್ತು ಕೆಎಸ್‌ಸಿಎ ಸಿಬ್ಬಂದಿ ನೇಮಕ ಮಾಡಲಾಗಿದೆ. ರಾಜ್ ನಗರದ ಕೆಎಸ್‌ಸಿಎ ಮೈದಾನದ ಗೇಟ್ 1ರಿಂದ ಕ್ರಿಕೆಟ್ ಪಟುಗಳಿಗೆ, ಬಿಸಿಸಿಐ ಮತ್ತು ಕೆಎಸ್‌ಸಿಎ ಸಿಬ್ಬಂದಿಗೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ. 100 ವಿವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ 2 ಸಾವಿರ ವಿಐಪಿಗಳಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿವಿಐಪಿ ಮತ್ತು ವಿಐಪಿ ವಿಭಾಗದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಮತ್ತು ಕೆಎಸ್‌ಸಿಎ ಪದಾಧಿಕಾರಿಗಳಿಗೆ ಮತ್ತು ಇನ್ನಿತರ ಪ್ರಮುಖರಿಗೆ ವ್ಯವಸ್ಥೆ ಮಾಡಲಾಗಿದೆ.
ಮ್ಯಾಚ್ ರೆಫರಿಯಾಗಿ ಬಿ. ರಘುನಾಥ ಕಾರ್ಯನಿರ್ವಹಿಸಲಿದ್ದು, ಸುಧೀರ್ ಅಸ್ನಾನಿ ಮತ್ತು ರಾಜೇಶ ದೇಶಪಾಂಡೆ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇಂದು ಮತ್ತೆ ಪೂರ್ವಾಭ್ಯಾಸ: ಭಾರತ ಎ ತಂಡ ಅ. 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪೂರ್ವಾಭ್ಯಾಸ ಮಾಡಲಿದ್ದು, ಮಧ್ಯಾಹ್ನ ಕೆರಿಬಿಯನ್ ತಂಡ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪೂರ್ವಾಭ್ಯಾಸ ಮಾಡಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಸಿಎ ಧಾರವಾಡ ವಲಯ ಸಂಯೋಜಕ ಬಾಬಾ ಬುಸದ್ ಮತ್ತು ಕೆಎಸ್‌ಸಿಎ ಮಾಧ್ಯಮ ವಿಭಾಗದ ಮುಖ್ಯಸ್ಥ ಮುರಳಿಧರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement