ಬೆವರು ಹರಿಸಿದ ಟೀಮ್ ಇಂಡಿಯಾ ಎ
ಹುಬ್ಬಳ್ಳಿ: ಸೋತು ಸುಣ್ಣವಾಗಿರುವ ಟೀಮ್ ಇಂಡಿಯಾ ಎ ತಂಡ ಸೋಮವಾರ ರಾಜ್ ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸುಮಾರು ಮೂರಕ್ಕೂ ಹೆಚ್ಚು ಗಂಟೆಗಳ ಕಾಲ ಬೆವರು ಸುರಿಸಿತು.
ಪ್ರಖರ ಬಿಸಿಲಿಗೂ ಹೆದರದೇ ಮಧ್ಯಾಹ್ನ ಮೈದಾನದ ಅಂಗಳಕ್ಕೆ ಕಾಲಿರಿಸಿದ ಟೀಮ್ ಇಂಡಿಯಾ ಎ ಆಟಗಾರರು ದೈಹಿಕ ತರಬೇತು ರಾಜೇಶ ಮತ್ತು ಫಿಸಿಯೋ ಅಮಿತ್ ತ್ಯಾಗಿ ಮಾರ್ಗದರ್ಶನದಲ್ಲಿ ಕೆಲ ಕಾಲ ದೈಹಿಕ ಕಸರತ್ತು ಮಾಡಿ ಪೂರ್ವಾಭ್ಯಾಸಕ್ಕೆ ಸಿದ್ಧರಾದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಹ್ಮದ್ ಕೈಫ್ ಪ್ಯಾಡ್ ಕಟ್ಟಿಕೊಂಡು ನೆಟ್ ಪ್ರಾಕ್ಟೀಸ್ ಶುರು ಮಾಡಿದರು. ವೇಗಿ ಜಹೀರಖಾನ್ ಕೆಲಕಾಲ ಡ್ರೆಸ್ಸಿಂಗ್ ರೂಂನಲ್ಲಿದ್ದುಕೊಂಡು ನೇರವಾಗಿ ಮೈದಾನದೊಳಗೆ ಓಡಿ ಬೆವರು ಹರಿಸಿದ ಅನಂತರ ನೆಟ್ ಪ್ರಾಕ್ಟೀಸ್‌ಗೆ ಬಂದು ಬೌಲಿಂಗ್ ಶುರು ಮಾಡಿದರು.
ನೆಟ್ ಪ್ರಾಕ್ಟೀಸ್: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ ಗಂಭೀರ್ ಒಟ್ಟಿಗೆ ನೆಟ್ ಪ್ರಾಕ್ಟೀಸ್‌ಗೆ ಇಳಿದಿದ್ದು, ವೀರೇಂದ್ರ ಸೆಹವಾಗ್ ಬೌಲಿಂಗ್ ಮಾಡಿದರೆ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿರುವ ಗೌತಮ್ ಗಂಭೀರ ಸುಮಾರು ಮೂರಕ್ಕೂ ಹೆಚ್ಚು ಗಂಟೆಗಳ ಕಾಲ ನೆಟ್ ಪ್ರಾಕ್ಟೀಸ್‌ನಲ್ಲಿ ಬ್ಯಾಟ್ ಬೀಸಿ ಅ. 9ರಂದು ನಡೆಯಲಿರುವ ಅಂತಿಮ ಪಂದ್ಯಕ್ಕೆ ಸಿದ್ಧತೆ ಮಾಡಿಕೊಂಡರು. ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಟೀಮ್ ಇಂಡಿಯಾ ಎ ನಾಯಕ ಚೇತೇಶ್ವರ ಪೂಜಾರ್, ಕೆಎಸ್‌ಸಿಎ ಕ್ರೀಡಾಂಗಣಕ್ಕೆ ಆಗಮಿಸುತ್ತಲೇ ಮಹ್ಮದ್ ಕೈಫ್‌ರೊಂದಿಗೆ ಸೇರಿಕೊಂಡು ಪಿಚ್ ಪರಿಶೀಲಿಸಿದರು. ಅನಂತರ ಸ್ಥಳೀಯ ಕ್ರಿಕೆಟ್ ಪಟುಗಳ ಬೌಲಿಂಗ್ ಎದುರಿಸಿದರು.
ಸೋಮವಾರ ಬೆಳಗ್ಗೆ ಪೂರ್ವಾಭ್ಯಾಸಕ್ಕೆ ಆಗಮಿಸಬೇಕಿದ್ದ ಕೆರಿಬಿಯನ್‌ರು ಮೈಸೂರಿನ ಪಂದ್ಯ ಗೆದ್ದು ನಿರಾಳವಾಗಿದ್ದಾರೆ. ಸೋಲು ಮಾತ್ರ ಅವರಿಂದ ಸರಣಿ ಕಿತ್ತುಕೊಳ್ಳುವ ಸಾಧ್ಯತೆ ಇರುವುದರಿಂದ ಹುಬ್ಬಳ್ಳಿ ಪಂದ್ಯ ಗೆಲವು ಮತ್ತು ಡ್ರಾ ಎರಡು ಆಯ್ಕೆಗಳನ್ನು ಮುಂದಿರಿಸಿಕೊಂಡು ನಿರಾಳವಾಗಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಎ ತಂಡದ ಉಪನಾಯಕ ಕರೈನ್ ಪೋವೆಲ್ ತಮ್ಮ ತಂಡದ ವ್ಯವಸ್ಥಾಪಕ ಸ್ಟುವರ್ಟ್‌ರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದರು.
ಮಸಾಜ್: ಬರೋಡಾ ರಣಜಿ ತಂಡದ ಆಫ್ ಸ್ಪಿನ್ನರ್ ಭಾರ್ಗವ್ ಭಟ್, ಜಮ್ಮು, ಕಾಶ್ಮೀರದ ಫರ್ವೇಜ್ ರಸೂಲ್, ಅಭಿಷೇಕ್ ನಾಯರ್, ವಿ.ಎ. ಜಗದೀಶ, ಎಡಗೈ ಸ್ಪಿನ್ನರ್ ಧವಳ ಕುಲಕರ್ಣಿ ಸೇರಿದಂತೆ ಎಲ್ಲ ಕ್ರಿಕೆಟಿಗರು ಅಭ್ಯಾಸ ನಡೆಸಿದರು. ಜಹೀರ್‌ಖಾನ್ ಮತ್ತು ಮಹ್ಮದ್ ಕೈಫ್ ಮಾತ್ರ ತಂಡದ ಫಿಸಿಯೋ ಅಮಿತ್ ತ್ಯಾಗಿ ಮಾರ್ಗದರ್ಶನದಲ್ಲಿ ದೈಹಿಕ ಕಸರತ್ತು ಮಾಡಿದ್ದು ಅಲ್ಲದೇ ಡ್ರೆಸ್ಸಿಂಗ್ ರೂಂನಲ್ಲಿ ಮಸಾಜ್ ಮಾಡಿಸಿಕೊಂಡರು. ಗಾಯದ ಸಮಸ್ಯೆ ಅವರಿಬ್ಬರನ್ನು ಕಾಡುತ್ತಿದೆ ಏನೋ ಎಂಬ ಅನುಮಾನ ಹುಟ್ಟು ಹಾಕಿತ್ತು.