ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ-ಧಾರವಾಡ ಬಂದ್ ಯಶಸ್ವಿ

Lingaraj Badiger
Updated On : 8 Oct 2013, 11:15 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 7
ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಸೇರಿದಂತೆ ಮತ್ತಿತರ ಸಂಘಟನೆಗಳು  ಸೋಮವಾರ ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್ ಯಶಸ್ವಿಯಾಗಿದೆ. ಅವಳಿ ನಗರದ ಜನತೆ ಬಂದ್ ಕರೆಗೆ ಸ್ವಯಂ ಪ್ರೇರಣೆಯಿಂದ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆಯಿಂದಲೇ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗೆಯ ಹೊತ್ತಿಗೆ ಹುಬ್ಬಳ್ಳಿ ಬಸ್ ನಿಲ್ದಾಣದ ಆಸುಪಾಸಿನ ಕೆಲ ಹೊಟೇಲ್ ಸೇರಿದಂತೆ ಕೆಲ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಆದರೆ ಹೊತ್ತೇರುತ್ತಿದ್ದಂತೆಯೇ ಅಂಗಡಿಗಳೆಲ್ಲವನ್ನು ಅಂಗಡಿಕಾರರೇ ಬಂದ್ ಮಾಡುವ ಮೂಲಕ ಬಂದ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಇನ್ನುಳಿದಂತೆ ಕೋರ್ಟ್, ಸರ್ಕಾರಿ ಕಚೇರಿಗಳೆಲ್ಲವೂ ಎಂದಿನಂತೆ ಕಾರ್ಯ ನಿರ್ವಹಿಸಿದವಾದರೂ ಜನದಟ್ಟಣೆ ಅಲ್ಲಿರಲಿಲ್ಲ. ಶಾಲಾ-ಕಾಲೇಜುಗಳೂ ಸಹ ಬಂದ್ ಮಾಡುವ ಮೂಲಕ ಬಂದ್ ಹೋರಾಟಕ್ಕೆ ಬೆಂಬಲ ನೀಡಿದವು. ಬಸ್ ಸಂಚಾರ ಬಂದಾಗಿದ್ದರಿಂದ ನೌಕರರು ಆಟೋಗಳಲ್ಲಿ ಕಚೇರಿ ತಲುಪಿಕೊಂಡರು. ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಪ್ರತಿಭಟನಾಕಾರರು ತೊಂದರೆ ನೀಡದೇ ಶಾಂತಿಯುತ ಬಂದ್ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು. ಆದಾಗಿಯ್ಯೂ ಹುಬ್ಬಳ್ಳಿಯ ಜನನಿಬಿಡ ಪ್ರದೇಶವಾದ ಚನ್ನಮ್ಮ ವೃತ್ತ, ಹಳೆಬಸ್‌ನಿಲ್ದಾಣ, ಸರ್ಕೀಟ್ ಹೌಸ್ ರೋಡ್, ಕ್ಲಬ್ ರೋಡ್, ಸ್ಟೇಶನ್ ರಸ್ತೆಯಲ್ಲಿ ಜನರ ಓಡಾಟ ಕುಸಿತಗೊಂಡ ಪರಿಣಾಮ ಬಿಕೋ ಎನ್ನುತ್ತಿತ್ತು.
ಬೃಹತ್ ಸಭೆ: ಪ್ರತಿಭಟನಾಕಾರರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಸೇರಿ ಬೃಹತ್ ಸಭೆ ನಡೆಸಿದರು. ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಮಾಜಿ ಸಚಿವ ಬಸವರಾಜ ಹೊರಟ್ಟಿ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸರ್ಕಾರದ ಧೋರಣೆ ಖಂಡಿಸಿದರಲ್ಲದೇ, ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿದರು. ಮಲಪ್ರಭಾ ನದಿಗೆ ಕಳಸಾ-ಬಂಡೂರಿ ನಾಲಾ ಜೋಡಣೆ ಸಂಬಂಧಿಸಿದಂತೆ ಮಹಾದಾಯಿ ನ್ಯಾಯಾಧಿಕರಣ ಮಧ್ಯಂತರ ಆದೇಶ ಹೊರಡಿಸುವಂತೆ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯಾಧಿಕರಣದ ಎದುರು ಸಮರ್ಥ ವಾದ ಮಂಡಿಸಬೇಕು. ಈ ಹಿನ್ನೆಲೆಯಲ್ಲಿ ಅ. 22ರ ವಿಚಾರಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹುಬ್ಬಳ್ಳಿ-ಧಾರವಾಡ ಬಂದ್ ಕರೆಯನ್ನು ನ್ಯಾಯಾಧಿಕರಣದ ಎದುರು ಪರಿಣಾಮಕಾರಿಯಾಗಿ ಮಂಡಿಸಬೇಕು ಎಂದರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಯೋಜನೆಯ ಅನುಷ್ಠಾನದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ರೈತರ ಭಾವನೆಗಳಿಗೆ ಬೆಲೆ ಕೊಟ್ಟು ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಆ ಬಳಿಕ ಪ್ರತಿಭಟನಾಕಾರರು ರೇಲ್ವೆ ನಿಲ್ದಾಣಕ್ಕೆ ತೆರಳಿ ಅಮರಾವತಿ ಎಕ್ಸ್‌ಪ್ರೆಸ್ ರೈಲು ತಡೆ ಮಾಡಿದರು. ನಂತರ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನೂರಾರು ರೈತರು, ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.
ಧಾರವಾಡದಲ್ಲೂ ಕಾವು: ಇದೇ ವೇಳೆ ಧಾರವಾಡದಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಾಭವನ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಬಳಿಕ ನಗರದಲ್ಲಿ ಮೆರವಣಿಗೆ ನಡೆಸಿದರು. ಕಲಾಭವನ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಸರ್ಕಾರಕ್ಕೆ ತಮ್ಮ ಒತ್ತಾಯದ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಜಡೆಪ್ಪ ದೇಸಾಯಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ವಿ.ಡಿ. ಕಾಮರೆಡ್ಡಿ, ಬಿ. ವಿ. ಸೋಮಾಪುರ, ಶಿವು ಹಿರೇಮಠ, ರಾಜು ಅಂಬೋರೆ, ತವನಪ್ಪ ಅಷ್ಟಗಿ, ಶಶಿಮೌಳಿ ಕುಲಕರ್ಣಿ ಸೇರಿದಂತೆ 50ಕ್ಕೂ ಹೆಚ್ಚು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement