ಹುಬ್ಬಳ್ಳಿ-ಧಾರವಾಡ ಬಂದ್ ಯಶಸ್ವಿ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕಾಗಿ ಸೋಮವಾರ ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಕರೆ ನೀಡಿದ್ದ ಬಂದ್‌ಗೆ ವಿದ್ಯಾನಗರಿ ಧಾರವಾಡ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಿತು.
ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಅಧಿಕೃತ ರಜೆ ಘೋಷಿಸದಿದ್ದರೂ ಬೆಳಗ್ಗೆ 7 ರಿಂದಲೇ ಬಸ್ ಸಂಚಾರ ಬಂದ್ ಆಗಿದ್ದರಿಂದ ಅನಧಿಕೃತ ರಜೆ ಎನ್ನುವಂತಿತ್ತು. ನಗರದ ಎಲ್ಲ ಪ್ರಮುಖ ರಸ್ತೆ ಹಾಗೂ ವೃತ್ತಗಳನ್ನು ಬಂದ್ ಮಾಡಲಾಗಿತ್ತು. ಮುಂಚೆಯೇ ಬಂದ್ ಸುದ್ದಿ ಗೊತ್ತಿದ್ದ ಕಾರಣ ಹೆಚ್ಚಿನ ಪ್ರಯಾಣಿಕರು ನಗರಕ್ಕೆ ಆಗಮಿಸಿರಲಿಲ್ಲ. ಆಟೋ ರಿಕ್ಷಾ ಮತ್ತು ಖಾಸಗಿ ವಾಹನಗಳ ಸಂಚಾರ ಕಂಡು ಬಂದಿತು. ನಗರದಲ್ಲಿ ಎಲ್ಲ ತರಹನಾದ ಅಂಗಡಿಗಳು, ಹೋಟೆಲ್, ಸಿನಿಮಾ ಮಂದಿರಗಳು ಸ್ವಯಂ ಪ್ರೇರಣೆಯಿಂದ ಸಂಜೆವರೆಗೂ ಮುಚ್ಚಿದ್ದವು.
ಹೀಗಿತ್ತು ಹೋರಾಟ: ಬೆಳಗ್ಗೆ 7ರಿಂದ 10ರ ವರೆಗೆ ಹೋರಾಟಗಾರರು ಕಲಾಭವನ ವೃತ್ತದ ಬಳಿ ಒಂದೆಡೆ ಸೇರಿ ಯೋಜನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು. 11ರ ಸುಮಾರಿಗೆ ನಗರದ ಪ್ರಮುಖ ವೃತ್ತಗಳಿಗೆ ಪಾದಯಾತ್ರೆ ಮೂಲಕ ತೆರಳಿ ಸ್ವಯಂ ಪ್ರೇರಣೆಯಿಂದ ಬಂದ್ ಗೆ ಬೆಂಬಲ ನೀಡುವಂತೆ ಹೋರಾಟಗಾರರು ಮನವಿ ಮಾಡಿದರು. ಅಲ್ಲದೇ, ಕಲಾಭವನ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಸರ್ಕಾರಕ್ಕೆ ತಮ್ಮ ಒತ್ತಾಯದ ಘೋಷಣೆಗಳನ್ನು ಕೂಗಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸುಮಾರು ಒಂದು ಗಂಟೆ ಹೋರಾಟದ ಮುಖಂಡರು ಭಾಷಣ ಮಾಡಿದರು. ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಮುಖಂಡರ ಮಾತುಗಳು: ರೈತ ಮುಖಂಡ ಜಡೆಪ್ಪ ದೇಸಾಯಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳು ವಿಪರೀತವಾಗಿ ಬೆಳೆಯುತ್ತಿವೆ. ಹೊಸ ಹೊಸ ಕೈಗಾರಿಕೆಗಳು ಬರುತ್ತಿವೆ. ಆದರೆ, ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರತಿ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳಸಾ-ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಬಂದರೆ ನೀರಿನ ಬವಣೆ ತಪ್ಪುತ್ತದೆ ಎಂದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಯೋಜನೆ ಅನುಷ್ಠಾನದ ವರೆಗೂ ಈ ಹೋರಾಟ ನಿಲ್ಲೋದಿಲ್ಲ. ಜಿಲ್ಲಾಧಿಕಾರಿಗಳು ಈ ಹೋರಾಟ ರೂಪವನ್ನು ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ವರದಿ ನೀಡುವ ಮೂಲಕ ಹೋರಾಟದ ತೀವ್ರತೆಯನ್ನು ಸರ್ಕಾರಕ್ಕೆ ತಿಳಿಸಬೇಕೆಂದು ಒತ್ತಾಯಿಸಿದರು.
ಯಾರ್ಯಾರಿದ್ದರು: ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ನ್ಯಾಯವಾದಿಗಳಾದ ಬಿ.ವಿ. ಸೋಮಾಪುರ ಮಾತನಾಡಿದರು. ನ್ಯಾಯವಾದಿ ಪಿ.ಎಚ್. ನೀರಲಕೇರಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ರಾಜು ಅಂಬೋರೆ, ಜಿ.ಪಂ. ಮಾಜಿ ಸದಸ್ಯ ತವನಪ್ಪ ಅಷ್ಟಗಿ, ರೈತ ಮುಖಂಡ ಶಶಿಮೌಳಿ ಕುಲಕರ್ಣಿ, ಮುಖಂಡರಾದ ಬಸವರಾಜ ಬಿಕ್ಕಣ್ಣವರ, ನಿಂಗಪ್ಪ ದಿವಟಗಿ, ಭೀಮಸಿ ಮರಗಣ್ಣವರ, ಕೆ.ಎಚ್. ಪಾಟೀಲ, ಈಶ್ವರ ಪಟ್ಟಣಶೆಟ್ಟಿ, ಎಂ.ಬಿ. ಕಟ್ಟಿ, ಲೀಲಾವತಿ ಕಳಸಪ್ಪನವರ ಇದ್ದರು. ರಾಜ್ಯ ರೈತ ಸಂಘ, ಹಸಿರು ಸೇನೆ, ಹೈಕೋರ್ಟ್ ಮತ್ತು ಧಾರವಾಡ ವಕೀಲರ ಸಂಘ, ಸಿಐಟಿಯು, ಆಲ್ ಇಂಡಿಯಾ ಲಾಯರ್ಸ್ ಅಸೋಶಿಯೇಶನ್, ಜೆಡಿಎಸ್, ರಕ್ಷಣಾ ವೇದಿಕೆ, ಕವಿವಿ ನಿವೃತ್ತ ನೌಕರರ ಸಂಘ, ಸಿಪಿಐ(ಎಂ), ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಫೆಡರೇಶನ್, ಕವಿವಿ ಶಿಕ್ಷಕೇತರ ನೌಕರರ ಸಂಘ, ಪ್ರೋಬಸ್ ಕ್ಲಬ್ ಸೇರಿದಂತೆ 50ಕ್ಕೂ ಹೆಚ್ಚು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಗೋವಾ ಹೆದ್ದಾರಿ ಬಂದ್...
ಕಳಸಾ-ಬಂಡೂರಿ ನಾಲಾ ಜೋಡಣೆ ವಿಚಾರವಾಗಿ ಸೋಮವಾರ ಬಂದ್ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಜೈಕಾರ, ಘೋಷಣೆಗಳಿಗೆ ಮಾತ್ರ ಬಂದ್ ಸೀಮಿತವಾಗಿತ್ತು. ಎಲ್ಲಿಯೂ ಒತ್ತಾಯಪೂರ್ವಕವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲಿಲ್ಲ. ಬರೀ ನಗರ ಮಾತ್ರವಲ್ಲದೇ, ಸಮೀಪದ ಕೆಲಗೇರಿ ಬಳಿ ಗೋವಾ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಅರ್ಧಗಂಟೆ ತಡೆದು ಗ್ರಾಮಸ್ಥರು ಪ್ರತಿಭಟಿಸಿದರು. ಡಿಸಿಪಿ ಶ್ರೀನಾಥ ಜೋಶಿ ನೇತೃತ್ವದಲ್ಲಿ ಎಸಿಪಿಗಳಾದ ಎಸ್.ಎಚ್. ಕೇರಿ, ಶಂಕರ ಹೊಳಿಹೊಸೂರ, ಇನ್‌ಸ್ಪೆಕ್ಟರಗಳಾದ ರಾಮನಗೌಡ ಹಟ್ಟಿ, ಚನ್ನಕೇಶವ ಬಿ.ಟಿ., ವಿಜಯಕುಮಾರ ತಳವಾರ, ಸಿಬ್ಬಂದಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಕೊಂಡಿದ್ದರು.