ಹುಬ್ಬಳ್ಳಿ-ಧಾರವಾಡ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಸೇರಿದಂತೆ ಮತ್ತಿತರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಅವಳಿ ನಗರದ ಜನತೆ ಬಂದ್ ಕರೆಗೆ ಸ್ವಯಂ ಪ್ರೇರಣೆಯಿಂದ ಸಹಕರಿಸಿದರು. ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆಯಿಂದಲೇ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗೆ ಹುಬ್ಬಳ್ಳಿ ಬಸ್ ನಿಲ್ದಾಣದ ಆಸುಪಾಸಿನ ಕೆಲವು ಹೊಟೇಲ್ ಸೇರಿದಂತೆ ಕೆಲವು ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಆದರೆ ಹೊತ್ತೇರುತ್ತಿದ್ದಂತೆಯೇ ಅಂಗಡಿಗಳೆಲ್ಲವನ್ನೂ ಅಂಗಡಿಕಾರರೇ ಬಂದ್ ಮಾಡುವ ಮೂಲಕ ಬಂದ್ ಅನ್ನು ಬೆಂಬಲಿಸಿದರು. ಇನ್ನುಳಿದಂತೆ ಕೋರ್ಟ್, ಸರ್ಕಾರಿ ಕಚೇರಿಗಳೆಲ್ಲವೂ ಎಂದಿನಂತೆ ಕಾರ್ಯ ನಿರ್ವಹಿಸಿದವಾದರೂ ಜನದಟ್ಟನೆ ಕಡಿಮೆ ಇತ್ತು. ಶಾಲಾ-ಕಾಲೇಜುಗಳೂ ಬಂದ್ ಆಗಿದ್ದವು. ಬಸ್ ಸಂಚಾರ ಬಂದಾಗಿದ್ದರಿಂದ ನೌಕರರು ಆಟೋಗಳಲ್ಲಿ ಕಚೇರಿ ತಲುಪಿಕೊಂಡರು. ಸಾರ್ವಜನಿಕರ ಸಂಚಾರಕ್ಕೆ ಪ್ರತಿಭಟನಾಕಾರರು ತೊಂದರೆ ನೀಡದೆ ಶಾಂತಿಯುತ ಬಂದ್ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು. ಆದಾಗಿಯ್ಯೂ ಹುಬ್ಬಳ್ಳಿಯ ಜನನಿಬಿಡ ಪ್ರದೇಶವಾದ ಚನ್ನಮ್ಮ ವೃತ್ತ, ಹಳೆ ಬಸ್ನಿಲ್ದಾಣ, ಸರ್ಕಿಟ್ ಹೌಸ್ ರೋಡ್, ಕ್ಲಬ್ ರೋಡ್, ಸ್ಟೇಷನ್ ರಸ್ತೆಯಲ್ಲಿ ಜನರ ಓಡಾಟ ಕುಸಿತಗೊಂಡ ಪರಿಣಾಮ ಬಿಕೋ ಎನ್ನುತ್ತಿತ್ತು.