ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೊಪ್ಪಳ ನಗರಸಭೆಪ್ರಕರಣ 16ಕ್ಕೆ ಮುಂದಕ್ಕೆ

Lingaraj Badiger
Updated On : 9 Oct 2013, 11:32 am

ಧಾರವಾಡ: ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕೊಪ್ಪಳ ನಗರಸಭೆ ಆಯುಕ್ತರ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆಯನ್ನು ಅ. 16ಕ್ಕೆ ಮುಂದೂಡಲಾಗಿದೆ. ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಹೈಕೋರ್ಟ್ ಪೀಠದ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಕೆ.ಎಲ್. ಮಂಜುನಾಥ ಹಾಗೂ ವೇಣುಗೋಪಾಲಗೌಡ ಅವರಿದ್ದ ವಿಭಾಗೀಯ ಪೀಠ, ಅಧಿಕಾರಿಗಳ ವರ್ತನೆ ಕುರಿತು ತೀವ್ರ ಅತೃಪ್ತಿ ವ್ಯಕ್ತಪಡಿಸಿತು. ಅಲ್ಲದೇ, ಮುಂದಿನ ವಿಚಾರಣೆ ಸಂದರ್ಭದಲ್ಲಿ ಎದುರುಗಾರರು ನ್ಯಾಯಾಲಯ ಸೂಚಿಸಿದ ಹಣವನ್ನು ಠೇವಣಿ ಮಾಡದಿದ್ದರೆ ಆರೋಪ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಸೂಚಿಸಿತು. ಅರ್ಜಿದಾರರ ಪರ ಬಿ.ಎಲ್. ಲಾಡಖಾನ್ ವಾದ ಮಂಡಿಸಿದರು.
ಹುಬ್ಬಳ್ಳಿ-ಗುಲ್ಬರ್ಗ ರೈಲು ಸಂಚಾರಕ್ಕೆ ಪಾಪು ಆಗ್ರಹ
ಹುಬ್ಬಳ್ಳಿ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ರೇಲ್ವೆ ವಲಯಗಳ ಮಹಾಪ್ರಬಂಧಕರ ಮಹಾಸಭೆಯನ್ನು ಹುಬ್ಬಳ್ಳಿಯಲ್ಲಿ ಕರೆದು ರಾಜ್ಯ ಎದುರಿಸುತ್ತಿರುವ ರೇಲ್ವೆ ಸೌಲಭ್ಯಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿರುವ ಅವರು, ರಾಜ್ಯದಲ್ಲಿ ದಕ್ಷಿಣ ರೇಲ್ವೆ, ದಕ್ಷಿಣ ಮಧ್ಯ ರೇಲ್ವೆ, ಕೇಂದ್ರ ರೇಲ್ವೆ ವಲಯಗಳ ಮಹಾಪ್ರಬಂಧಕರ ಸಭೆ ಕರೆದು ಹುಬ್ಬಳ್ಳಿಯನ್ನು ಕೇಂದ್ರಸ್ಥಾನವಾಗಿರಿಸಿಕೊಂಡಿರುವ ನೈಋತ್ಯ ರೇಲ್ವೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ರೇಲ್ವೆ ಬೋರ್ಡ್‌ಗೆ ಆದೇಶಿಸಬೇಕು  ಎಂದು ಹೇಳಿದ್ದಾರೆ.
ಹುಬ್ಬಳ್ಳಿ-ಗುಲ್ಬರ್ಗ ರೈಲು ಆರಂಭಿಸಿ: ಬಿಜಾಪುರ, ಹುಟಗಿ ಮತ್ತು ಸೊಲ್ಲಾಪುರ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣಗೊಂಡು ದಶಕ ಕಳೆದರೂ ರಾಜ್ಯದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಿಂದ ಗುಲ್ಬರ್ಗಕ್ಕೆ ನೇರ ರೈಲು ಸಂಪರ್ಕವಿಲ್ಲ. ಈ ಮಾರ್ಗದ ಮುಖಾಂತರ ಹುಬ್ಬಳ್ಳಿ-ಗುಲ್ಬರ್ಗ ರೈಲು ಸಂಚಾರ ಆರಂಭಿಸಲು ಅವಕಾಶ ಇದೆ ಎನ್ನುವ ಪರಿಕಲ್ಪನೆ ರೇಲ್ವೆ ಇಲಾಖೆ ಅಧಿಕಾರಿಗಳಿಗೆ ಇಲ್ಲ ಎಂದು ಹೇಳಿದ್ದಾರೆ. ನೈಋತ್ಯ ರೇಲ್ವೆ ವಲಯಕ್ಕೆ ಮಂಗಳೂರು, ಗುಲ್ಬರ್ಗ ವಿಭಾಗಗಳನ್ನು ಮತ್ತು ಕೊಂಕಣ ರೇಲ್ವೆಯನ್ನು ಸೇರ್ಪಡೆ ಮಾಡಬೇಕು. ಈಗಾಗಲೇ ನೈಋತ್ಯ ರೇಲ್ವೆ ವಲಯದ ವ್ಯಾಪ್ತಿಯಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳು ನೈಋತ್ಯ ಇದ್ದು, ಕೇಂದ್ರ ಸರ್ಕಾರದ ಸರೀನ್ ಆಯೋಗದ ವರದಿ ಪ್ರಕಾರ ವಲಯವೊಂದರ ವ್ಯಾಪ್ತಿಯಲ್ಲಿ ಕನಿಷ್ಠ ನಾಲ್ಕು ವಿಭಾಗಗಳು ಇರಬೇಕೆಂದು ಕಡ್ಡಾಯ ಮಾಡಲಾಗಿದ್ದು, ಆ ವರದಿಗೆ ಅನುಗುಣವಾಗಿ ಕೊಂಕಣ ರೇಲ್ವೆ, ಗುಲ್ಬರ್ಗ ವಿಭಾಗ, ಮಂಗಳೂರು ವಿಭಾಗಗಳನ್ನು ನೈಋತ್ಯ ರೇಲ್ವೆಗೆ ಸೇರ್ಪಡೆ ಮಾಡಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement