ನಾಳೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಧಾರವಾಡ: ಧಾರವಾಡದ ಮೂಲ ದಸರಾ ಜಂಬೂಸವಾರಿ 'ದಶಮಾನೋತ್ಸವ-2013'ರ ಅಂಗವಾಗಿ ಅ. 10ರಂದು ನಗರದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಲ್ಲಿಯ ಸಾರಸ್ವತಪುರ ಮಾರುತಿ ನಗರದ ಗೌಳಿಗಲ್ಲಿಯ ಶ್ರೀ ಮಾರುತಿ ದೇವಸ್ಥಾನದ ವಿಶ್ವಸ್ಥ ಮಂಡಳಿ ವತಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮ ಕರ್ನಾಟಕ ಕಾಲೇಜು ಆವರಣದಲ್ಲಿನ ಸೃಜನಾ ರಂಗಮಂದಿರದಲ್ಲಿ ಅಂದು ಸಂಜೆ 5.30ರಿಂದ ರಾತ್ರಿ 10ರ ವರೆಗೆ ನಡೆಯಲಿದೆ. ಗಾಯಕರಾದ ಪಂ.ಎಂ. ವೆಂಕಟೇಶಕುಮಾರ ಹಾಗೂ ಉಮಾ ಬಾಲಸುಬ್ರಹ್ಮಣ್ಯ ಗಾಯನ ಪ್ರಸ್ತುತಪಡಿಸಲಿದ್ದು, ಕೇಶವ ಜೋಶಿ ಹಾಗೂ ಗುರುಪ್ರಸಾದ ಹೆಗಡೆ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಆಕಾಶವಾಣಿ ಹಾಗೂ ದೂರದರ್ಶನದ 'ಎ' ಶ್ರೇಣಿಯ ಕಲಾವಿದರಾದ ಪಂ.ಎಂ. ವೆಂಕಟೇಶಕುಮಾರ ಅವರು ರಾಷ್ಟ್ರದ ಹಿಂದುಸ್ತಾನಿ ಸಂಗೀತ ಕ್ಷೇತ್ರದ ಅಗ್ರ ಪಂಕ್ತಿಯ ಗಾಯಕರು. ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಇವರು, ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸಂಗೀತ ನಾಟಕ ಪುರಸ್ಕಾರ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ. ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಉಮಾ ಅವರು ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಅಲಂಕಾರ ಪದವಿ ಪಡೆದಿದ್ದು, ಸುಮಾರು 10 ವರ್ಷಗಳಿಂದ ಮುಂಬಯಿನಲ್ಲಿ ವಾಸ್ತವ್ಯ ಮಾಡಿ, ಗುರುಕುಲ ಪದ್ಧತಿಯಲ್ಲಿ, ಮುಂಬಯಿ ಗ್ವಾಲಿಯರ, ಜಯಪುರ ಮತ್ತು ಆಗ್ರಾ ಘರಾಣೆಗಳ ಖ್ಯಾತ ಸಂಗೀತ ವಿದುಷಿ ಶುಭದಾ ಪಾರಡ್ಕರ ಅವರಲ್ಲಿ ಉನ್ನತ ಸಂಗೀತ ಅಭ್ಯಾಸ ಮಾಡಿದ್ದರು. ಈಗಲೂ ಅವರ ಮಾರ್ಗದರ್ಶನದಲ್ಲಿಯೇ ಸಂಗೀತಾಭ್ಯಾಸ ಮುಂದುವರೆಸಿದ್ದಾರೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ 2001-3ನೇ ಸಾಲಿನ ವಿದ್ಯಾರ್ಥಿ ವೇತನ (ಗಾಯನ ಅಭ್ಯಾಸಕ್ಕೆ) ಪಡೆದಿದ್ದಾರೆ. ಉಮಾ ಅವರು ಸದ್ಯ ಧಾರವಾಡದಲ್ಲಿ ವಾಸವಾಗಿದ್ದಾರೆ.