ಬದಲಾಗದ ಉಪ ನೋಂದಾಣಾಧಿಕಾರಿ ಕಚೇರಿ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 8
ಸರ್ಕಾರದ ಕೆಲಸ, ದೇವರ ಕೆಲಸ ಹಾಗೂ ಸರ್ಕಾರಿ ಕಚೇರಿಗಳು ಸಾರ್ವಜನಿಕ ಸ್ನೇಹಿಯಾಗಿರಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದ್ದರೂ ಇಲ್ಲಿನ ಸರ್ಕಾರಿ ಕಚೇರಿಯೊಂದು ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯು ಸಾರ್ವಜನಿಕರಿಗೆ ಅನೇಕ ರೀತಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ವಿವಾಹ ನೋಂದಣಿ, ಸಂಚಕಾರ ನೋಂದಣಿ, ಜಮೀನು ಖರೀದಿ ಪತ್ರ, ಬೋಜಾ ಕೂರಿಸುವುದು, ಕಟ್ಟಡಗಳ ನೊಂದಣಿ ಸೇರಿದಂತೆ ಎಲ್ಲ ರೀತಿಯ ನೋಂದಣಿ ಮಾಡಿಕೊಳ್ಳುವ ಈ ಕಚೇರಿಯ ಸಾರ್ವಜನಿಕ ಸ್ನೇಹಿಯಾಗಿಲ್ಲ. ರೈತರಿಗೆ, ಹೊಸದಾಗಿ ಜಮೀನು ಅಥವಾ ಜಾಗ ಖರೀದಿಸಿದ ಮಾಲೀಕರಿಗೆ ಇನ್ನಿತರೆ ಕೆಲಸಗಳಾಗಿ ನೋಂದಣಿ ಮಾಡಿಸುವವರಿಗೆ ಈ ಕಚೇರಿ ವಿಳಂಬ ನೀತಿಯಿಂದ ಸಾಕುಸಾಕಾಗಿದೆ.
ಏನೇನು ತೊಂದರೆ..?: ಬೆಳೆಸಾಲ ಪಡೆದ ರೈತರು ಬ್ಯಾಂಕುಗಳಿಂದ ಅಗತ್ಯ ದಾಖಲೆಗಳನ್ನು ತಂದರೂ ಅವರ ಪಹಣಿ ಪತ್ರಿಕೆಯಲ್ಲಿ ಬೋಜಾ ಕೂರಿಸಲು ಕನಿಷ್ಠ ಎರಡು ದಿನ ಬೇಕು. ಅಲ್ಲದೇ, ಸಣ್ಣದೊಂದು ಕೆಲಸಕ್ಕೂ ಎರಡ್ಮೂರು ದಿನ ಅಲೆಯುವಂತಾಗಿದೆ ಎಂದು ರೈತರು ಈ ಕಚೇರಿ ಅಧಿಕಾರಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿರುವುದು ಹೊಸತೇನಲ್ಲ. ಹೊಸದಾಗಿ ಜಮೀನು ಅಥವಾ ಜಾಗ ಖರೀದಿಸಿದಾಗ ಆದಷ್ಟು ಬೇಗ ನೋಂದಣಿ ಮಾಡಿಸಲೇಬೇಕು. ಇತ್ತೀಚೆಗೆ ಧಾರವಾಡ ನಗರ ಸಹ ವಿಪರೀತವಾಗಿ ಬೆಳೆಯುತ್ತಿದ್ದು, ಜಾಗಕ್ಕೆ ಹೆಚ್ಚಿನ ಮೌಲ್ಯ ಬಂದಿದೆ. ಹೀಗಾಗಿ ಲಕ್ಷಾಂತರ ರುಪಾಯಿ ವ್ಯವಹಾರ ಖರೀದಿ ನಡೆಯುತ್ತಿದ್ದು, ಇದನ್ನು ಮಧ್ಯವರ್ತಿಗಳು ನೋಂದಣಿ ಸಂದರ್ಭದಲ್ಲಿ ಮಾಲೀಕರಿಂದ ಹಣ ಕೀಳುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ಜಾಸ್ತಿ ಕಮೀಶನ್ ನೀಡಿದರೆ ಬೇಗ ಕೆಲಸ. ಇಲ್ಲದಿದ್ದರೆ ಇಲ್ಲ. ಇದೆಲ್ಲಾ ಉಪ ಕಚೇರಿ ಎಲ್ಲ ಹಂತದ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿರುವುದು ಬೇಸರದ ಸಂಗತಿ.
ಸಾರ್ವಜನಿಕರಿಗಿಲ್ಲ ಗೌರವ: ಕಚೇರಿಯಲ್ಲಿ ಉಂಟಾದ ಕೆಟ್ಟ ಅನುಭವಗಳ ಬಗ್ಗೆ ನಾಗರಿಕರಾದ ಶ್ರೀಶೈಲಗೌಡ ಕಮತರ ಕನ್ನಡಪ್ರಭಕ್ಕೆ ವಿವರಿಸಿದ್ದಾರೆ. ಸರ್ಕಾರಿ ಕಚೇರಿಗಳು ಸಾರ್ವಜನಿಕರಿಗಾಗಿಯೇ ಇವೆ ಎಂಬುದು ಈ ಕಚೇರಿ ಅಧಿಕಾರಿಗಳಿಗೆ ಗೊತ್ತಿಲ್ಲ. ಸಾರ್ವಜನಿಕರಿಗೆ ಕಿಂಚಿತ್ ಗೌರವ ನೀಡುವುದಿಲ್ಲ. ನೋಂದಣಿ ಕಾರ್ಯ ಬೇಗ ಮಾಡಿಕೊಡಿ ಎಂದು ಕೇಳಿದರೆ ಅನೇಕ ಕಾರಣಗಳನ್ನು ಹೇಳಿ ನಾಳೆ ಬನ್ನಿ ಎಂದು ಉತ್ತರಿಸುತ್ತಾರೆ. ಈ ಭಾಗದ ಶಾಸಕರನ್ನೇ ನಾವು ಓಡಾಡಿಸುತ್ತೇವೆ. ಇನ್ನು, ನೀವು ಯಾವ ಲೆಕ್ಕ ಎಂದು ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಮುಖಂಡರು ಎನಿಸಿಕೊಂಡವರು ತುಸು ಹೆಚ್ಚು ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಮಧ್ಯಮ ವರ್ಗದ ಹಾಗೂ ಬಡ ಜನತೆ ಇಲ್ಲಿ ಯಾವ ರೀತಿಯ ನ್ಯಾಯಯುತವಾಗಿ ಕೆಲಸ ಮಾಡಿಸಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಕಮತರ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಕಚೇರಿಯಲ್ಲಿ ಬೋಜಾ ಕೂರಿಸುವುದು, ನೋಂದಣಿಗೆ ಭಾವಚಿತ್ರ ಹಾಗೂ ಇನ್ನಿತರೆ ತಾಂತ್ರಿಕ ಕೆಲಸವನ್ನು ಇಎಸ್ಇಎಲ್ ಕಂಪನಿಗೆ ಹೊರಗುತ್ತಿಗೆ ನೀಡಿದ್ದು, ಕಂಪ್ಯೂಟರ್ ಬರೀ ಸರ್ವರ್ ಸಮಸ್ಯೆಯಿಂದ ಬಳಲುತ್ತಿವೆ. ಬೋಜಾ ಕೂರಿಸುವ ಐದು ನಿಮಿಷದ ಕೆಲಸಕ್ಕೆ ಎರಡು ದಿನ ಓಡಾಡಲೇಬೇಕು. ಅಲ್ಲದೆ, ಕಚೇರಿಯು ರಸ್ತೆಗೆ ಕೂಡಿಕೊಂಡೇ ಇರುವುದರಿಂದ ನಿತ್ಯ ಟ್ರಾಫಿಕ್ ಸಮಸ್ಯೆ ತೀವ್ರ ಕಾಡುತ್ತದೆ. ಮಹಿಳೆಯರು, ಹಿರಿಯರಿಗೆ ಕಚೇರಿಯಲ್ಲಿ ಕೂರಲು ಒಂದೆಡೆ ಇರಲಿ, ನಿಲ್ಲಲು ಜಾಗವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಂತೂ ದೂರದ ಮಾತು. ಹೀಗಾಗಿ ನೋಂದಣಿ ಮಾಡಿಸಿಕೊಳ್ಳಲು ಬಂದ ಸಾರ್ವಜನಿಕರಿಗೆ ಈ ಕಚೇರಿ ಸ್ಥಿತಿ ಕಂಡು ತೀವ್ರ ಸಂಕಟವಾಗುತ್ತಿದೆ. ಜಿಲ್ಲಾಧಿಕಾರಿಗಳೇ ಈ ಕಚೇರಿ ಕೆಲಸ ಕಾರ್ಯಗಳ ಬಗ್ಗೆ ತುಸು ಗಮನ ಹರಿಸಿ ಕಚೇರಿ ವಾತಾವರಣ ಸುಧಾರಿಸುವ ಪ್ರಯತ್ನ ಮಾಡಬೇಕಿದೆ.