ವಿದ್ಯುತ್ ಕಡಿತ: ಹೆದ್ದಾರಿ ತಡೆದು ಪ್ರತಿಭಟನೆ
ಕಲಘಟಗಿ: ತಾಲೂಕಿನ ರೈತರಿಗೆ ಭರವಸೆ ನಿಡಿದಂತೆ ಹೆಸ್ಕಾಂ ನಿಗದಿತ ವೇಳೆಯಲ್ಲಿ ವಿದ್ಯುತ್ ಪೂರೈಸದಿರುವುದನ್ನು ವಿರೋಧಿಸಿ ತಾಲೂಕಿನ ರೈತರು ಮಂಗಳವಾರ ಪಟ್ಟಣದ ಬಸ್ ನಿಲ್ದಾಣದ ಬಳಿ ಹೆದ್ದಾರಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದು ಗಂಟೆ ವರೆಗೆ ನಡೆದ ರಸ್ತೆ ತಡೆಯಿಂದಾಗಿ ಮಂಗಳವಾರ ಸಂತೆ ದಿನವಾಗಿದ್ದರಿಂದ ಸಂಚಾರ ತೀವ್ರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಜಿಲ್ಲಾಧ್ಯಕ್ಷ ಎಸ್.ಎನ್. ಬನವಣ್ಣವರ, ಉಳವಪ್ಪ ಬಳಿಗೇರ ಮಾತನಾಡಿ, ಸಂಜೆ 6ರಿಂದ ಬೆಳಗಿನ 6ರ ವರಗೆ ಸಿಂಗಲ್ ಫೇಸ್ ವಿದ್ಯುತ್, ಹಗಲು ಹೊತ್ತಿನಲ್ಲಿ 6 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಪೂರೈಸಬೇಕು ಎಂದು ಆದೇಶಿಸಿದ್ದರೂ ಇಲ್ಲಿನ ಹೆಸ್ಕಾಂ ಇಲಾಖೆ ಬೇಕಾಬಿಟ್ಟಿಯಾಗಿ ವಿದ್ಯುತ್ ಪೂರೈಸುತ್ತಿದೆ ಎಂದು ದೂರಿದರು. ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನಸ್ವಾಮಿ, ಎಸ್.ಎ. ಕಡಪಾಲಿ, ಪೊಲೀಸರು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗಿರೀಶ ರೆಡ್ಡೇರ್, ಮಹಾದೇವಪ್ಪ, ವೈ.ಬಿ. ಗುರುಪಾದ ಗೌಡ್ರ, ಮಡಿವಾಳಿ ಹೂಗಾರ, ಗುರುಸಿದ್ದಪ್ಪ ಟೊಂಗಳೆ, ಗುರುಸಿದ್ದ ಕೆಲಗೇರಿ, ಫಕ್ಕೀರಗೌಡ ದೊಡಮನಿ, ಶಿವಪುತ್ರಪ್ಪ ಶಿವಶೆಟ್ಟರ್, ಬಸವರಾಜ ಕೂಡಲಗಿ, ಅಜ್ಜಯ್ಯ ಹಿರೇಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.