ಮಹತ್ವ ಪಡೆಯುತ್ತಿರುವ ಜಾನಪದ: ವರ್ಧನ್
ಧಾರವಾಡ: ನಮ್ಮ ಸಂಸ್ಕೃತಿಯ ಹತ್ತು ಹಲವು ಆಯಾಮಗಳಲ್ಲಿ ಜಾನಪದ ಇಂದು ಮತ್ತೆ ಮಹತ್ವ ಪಡೆಯುತ್ತಿದೆ ಎಂದು ಡಿಡಿಪಿಐ ಡಾ.ಬಿ.ಕೆ.ಎಸ್. ವರ್ಧನ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆಯ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ನಮ್ಮ ನಾಡಿನ ವೀರಯೋಧರ ಚರಿತ್ರೆಗಳನ್ನು ಲಾವಣಿ, ಗೀಗಿ ಪದಗಳಲ್ಲಿ ಕಾಣಬಹುದಾಗಿದೆ. ಹಾಗೆಯೇ ನಮ್ಮ ಸಾಂಸ್ಕೃತಿಯ ಸೌಹಾರ್ದ ಗೀತೆಗಳನ್ನು ಹೆಜ್ಜೆ ಮೇಳದಲ್ಲಿ ಕಾಣಬಹುದು. ದೊಡ್ಡಾಟ, ಸಣ್ಣಾಟ ಹೀಗೆ ವೈವಿಧ್ಯಮಯವಾದ ಜಾನಪದ ಕಣಜ ಕನ್ನಡನಾಡಿಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಹುಬ್ಬಳ್ಳಿ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ಶ್ರೀಲತಾ ಹೆಬ್ಬಾರ ಪ್ರಥಮ, ಕೆ.ಎಸ್. ಜಿಗಳೂರು ಮಹಿಳಾ ಕಾಲೇಜಿನ ನಿರ್ಮಲಾ ಮೂರಕಟ ಹಾಗೂ ಸಿಎಸ್‌ಐ ಕಾಲೇಜಿನ ರಂಜಿತಾ ಗ್ಯಾರಿ ದ್ವಿತೀಯ ಬಹುಮಾನ ಪಡೆದರು. ಜೆಎಸ್ಸೆಸ್ ಕಾಲೇಜಿನ ಅಂದ ವಿದ್ಯಾರ್ಥಿ ನಾಗರಾಜ ಎ. ತೃತೀಯ ಸ್ಥಾನ ಪಡೆದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಅನಿಲ ದೇಸಾಯಿ ಮಾತನಾಡಿ, ನಮ್ಮ ಜಾನಪದ ಕಲೆಗಳನ್ನು, ಕಲಾವಿದರನ್ನು ಬೆಳೆಸಬೇಕು. ಅವರ ಕಲೆಗೆ ಬೆಲೆ ಬರಬೇಕಾದರೆ ಎಲ್ಲರ ಪರಿಶ್ರಮ ಬೇಕು. ಪ್ರತಿಯೊಬ್ಬ ಕಲಾವಿದ ಇಂದು ತನ್ನ ಸಾಧನೆಯಿಂದ ಮುಂದೆ ಬರಬೇಕು. ಸಮಾಜದಲ್ಲಿ ಹತ್ತು ಹಲವು ಕಡೆ ಜಾನಪದ ಗೀತೆಗಳಿಗೆ ತುಂಬ ಬೇಡಿಕೆ ಇದ್ದು, ಯುವ ಕಲಾವಿದರು ಜಾನಪದ ಗೀತೆಗಳನ್ನು ನಿಷ್ಠೆಯಿಂದ ಕಲಿಯಬೇಕಿದೆ ಎಂದರು. ಜಾನಪದ ಗಾಯಕ ಮಲ್ಲಯ್ಯ ತೋಟಗಂಟಿ ಲಾವಣ, ಗೀಗಿ ಪದಗಳನ್ನು ಪ್ರಸ್ತುತಪಡಿಸಿದರು. ಸಂಯೋಜಕ ಬಸವರಾಜ ಮ್ಯಾಗೇರಿ, ಡಾ. ಶ್ರೀಶೈಲ ಹುದ್ದಾರ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸತೀಶ ಶಿವಪ್ಪಯ್ಯನವರಮಠ, ಎಫ್.ಬಿ. ಕಣವಿ, ಎಸ್.ಆರ್. ರಾಚಣ್ಣವರ, ಪಿ.ಆರ್. ಹಲವಾಯಿ ಇದ್ದರು.
ನಮ್ಮ ಜಾನಪದ ಕಲೆಗಳನ್ನು, ಕಲಾವಿದರನ್ನು ಬೆಳೆಸಬೇಕು. ಅವರ ಕಲೆಗೆ ಬೆಲೆ ಬರಬೇಕಾದರೆ ಎಲ್ಲರ ಪರಿಶ್ರಮ ಬೇಕು. ಯುವ ಕಲಾವಿದರು ಜಾನಪದ ಗೀತೆಗಳನ್ನು ನಿಷ್ಠೆಯಿಂದ ಕಲಿಯಬೇಕಿದೆ.
- ಅನಿಲ ದೇಸಾಯಿ,
ಜಿಲ್ಲಾ ಕಸಾಪ ಕಾರ್ಯದರ್ಶಿ