ಸೃಜನಶೀಲತೆಗೆ ರಂಗ ಕಲೆಗಳತ್ತ ಮುಖ ಮಾಡಿ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 9
ಪ್ರಸ್ತುತ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವಿವಿಧ ಮಾಧ್ಯಮಗಳಲ್ಲಿ ಕಳೆದು ಹೋಗುತ್ತಿರುವ ಯುವ ಜನಾಂಗ ತಮ್ಮ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದರೆ ರಂಗ ಕಲೆಗಳತ್ತ ಮುಖ ಮಾಡಬೇಕು ಎಂದು ರಂಗಸಮಾಜದ ಸದಸ್ಯ, ನಾಟಕಕಾರ ಡಾ. ಡಿ.ಎಸ್. ಚೌಗಲೆ ಅಭಿಪ್ರಾಯಿಸಿದರು.
ಇಲ್ಲಿನ ರಂಗಾಯಣ ಆವರಣದಲ್ಲಿ ನಡೆಯುತ್ತಿರುವ ಒಂಭತ್ತು ದಿನಗಳ ನವರಾತ್ರಿ ಯುವರಂಗೋತ್ಸವದ 5ನೇ ದಿನದ ಪುಗಳೆಂದಿ ಪ್ರಹಸನ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪಾಠ ಕಲಿಸುತ್ತದೆ: ಪ್ರಾಧ್ಯಾಪಕರಾದ ಅನುಪಮಾ ಢವಳೆ ಮಾತನಾಡಿ, ಪ್ರಸ್ತುತ ಶಿಕ್ಷಣ ಕೇವಲ ಮಾಹಿತಿ ಒದಗಿಸುತ್ತದೆ. ಬದುಕು ಕಟ್ಟಿಕೊಳ್ಳುವ ಅನುಭವ ಒದಗಿಸುತ್ತಿಲ್ಲ. ಪರಂಪರೆ ಇತಿಹಾಸವನ್ನು ಕೇವಲ ಮಾಹಿತಿಯಾಗಿ ನೋಡದೆ, ಜೀವನಾನುಭವವನ್ನಾಗಿ ನೋಡಬೇಕಿದೆ. ಹಾಗಾಗಬೇಕಾದರೆ ರಂಗ ಶಿಕ್ಷಣ ಅಗತ್ಯ. ರಂಗಭೂಮಿ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಮಾತಿನ ಗತಿ, ಬೇರೆಯವರೊಂದಿಗೆ ಬೆರೆಯುವ ರೀತಿ, ಭಾಷೆ, ಸಂಸ್ಕೃತಿಯನ್ನು ಗೌರವಿಸುವ ಪಾಠ ಕಲಿಸುತ್ತದೆ. ನಾಟಕಗಳು ಸಂಸ್ಕೃತಿ, ಜೀವನ ಶೈಲಿಯ ಒಂದು ಭಾಗ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿದರು. ಕೆ. ಜಗುಚಂದ್ರ ಪ್ರಾರ್ಥಿಸಿದರು. ಆಡಳಿತಾಧಿಕಾರಿ ಕೆ.ಎಚ್. ಚನ್ನೂರ ಸ್ವಾಗತಿಸಿದರು. ಮಲ್ಲಪ್ಪ ಹೊಂಗಲ ವಂದಿಸಿದರು. ವಿಷಯಾ ಜೇವೂರ ನಿರೂಪಿಸಿದರು. ನಂತರ ಭಾಸ್ಕರ ನಿರ್ದೇಶನದಲ್ಲಿ ಧಾರವಾಡದ ಬಸವರೆಡ್ಡಿ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸನ್ನ ಅವರ ಪುಗಳೆಂದಿ ಪ್ರಹಸನ ನಾಟಕವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು. ಪುಗಳೆಂದಿ ಪಾತ್ರದ ವಿದ್ಯಾರ್ಥಿ ತಮ್ಮ ಇಬ್ಬರೂ ಮಾಲೀಕರಿಗೆ ಗೊತ್ತಿಲ್ಲದೇ ಇಬ್ಬರಿಗೂ ಆಳಾಗಿ ಕೆಲಸ ಮಾಡುತ್ತಲೇ ನಾಟಕ ಪೂರ್ತಿ ನಗಿಸುತ್ತಾನೆ. ಜೊತೆಯಾಗಿ ಪ್ರೀತಿ, ಪ್ರೇಮ, ಬೈಗುಳ ಹಾಗೂ ಹಾಸ್ಯ ಎಲ್ಲವೂ ನಾಟಕದಲ್ಲಿ ಬಂದು ಹೋಗುತ್ತದೆ.
ಇಂದು ನನಗ್ಯಾಕೋ ಡೌಟು
ಧಾರವಾಡ: ನವರಾತ್ರಿ ಯುವರಂಗೋತ್ಸವ ಅಂಗವಾಗಿ ರಂಗಾಯಣದ ಬಯಲು ರಂಗಮಂದಿರದಲ್ಲಿ ಅ. 10ರಂದು ಸಂಜೆ 6.30ಕ್ಕೆ ಬಿ.ಆರ್. ಲಕ್ಷ್ಮಣರಾವ್ ರಚಿಸಿದ, ರಾಜ್ ಕವಡೆನವರ ನಿರ್ದೇಶನದ ನನಗ್ಯಾಕೋ ಡೌಟು ನಾಟಕವನ್ನು ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸುತ್ತಾರೆ. ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಉದ್ಘಾಟಿಸುವರು. ಮನೋಹರ ಗ್ರಂಥಮಾಲೆಯ ಪ್ರಕಾಶಕ ಡಾ. ರಮಾಕಾಂತ ಜೋಶಿ ಅಧ್ಯಕ್ಷತೆ ವಹಿಸುವರು. ರಂಗ ನಿರ್ದೇಶಕರಾದ ಬಿ.ಐ. ಈಳಿಗೇರ ಹಾಗೂ ರಂಗ ಕಲಾವಿದ ರವಿ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸುವರು.