ಅವಳಿನಗರಕ್ಕೆ ಎಚ್‌ಡಿಬಿಆರ್‌ಟಿಎಸ್ ದುಃಸ್ವಪ್ನ
ಹುಬ್ಬಳ್ಳಿ: ಒಂದು ಯೋಜನೆ ಸರಿಯಾಗಿತ್ತು. ಅದಕ್ಕೆ ಇನ್ನೊಂದು ಸೇರಿಸುವ ಮತ್ತಷ್ಟು ಚೆಂದ ಮಾಡುವ ಎಂದು ಹೇಳಿಕೊಂಡು ಅಷ್ಟೋ ಇಷ್ಟೋ ಚೆನ್ನಾಗಿದ್ದ ರಸ್ತೆಯನ್ನು ಹದಗೆಡಿಸಿದ್ದೂ ಅಲ್ಲದೇ ಅವಳಿ ನಗರದ ನಾಗರಿಕರನ್ನು ದುಃಸ್ವಪ್ನದಂತೆ ಕಾಡುವಂತೆ ಮಾಡಿದ್ದು ಎಚ್‌ಡಿಬಿಆರ್‌ಟಿಎಸ್ ಅಧಿಕಾರಿ ವರ್ಗ.
ರಾಜ್ಯದ ಏಕೈಕ ಯೋಜನೆ ಬಸ್ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ ಎಂಬ ಖ್ಯಾತಿ ಪಡೆದು, ಇದೀಗ ಅವಳಿ ನಗರದ ನಾಗರಿಕರಿಗೆ ಧೂಳು ಕುಡಿಸುವ ಮೂಲಕ ಅಪಖ್ಯಾತಿಗೆ ಒಳಗಾಗಿದೆ. ಉತ್ತರ ಕರ್ನಾಟಕ ನಾಣ್ಣುಡಿಯಂತೆ 'ಮದಲಿಂದು ಬೇಸಿ, ಈಗಿಂದೂ ...' ಎಂದು ಮಾತನಾಡಿಕೊಳ್ಳುವ ಹಾಗಿದೆ.
ಹುಬ್ಬಳ್ಳಿ-ಧಾರವಾಡ ಮಧ್ಯೆ ನಿತ್ಯ ಪಯಣಿಸುವ 2.2 ಲಕ್ಷಕ್ಕೂ ಹೆಚ್ಚು ಜನರಿಗೆ ನಿತ್ಯ ಧೂಳಿನ ಸ್ನಾನ ಆಗುತ್ತಿರುವುದಕ್ಕೆ ಕಾರಣ ಬಿಆರ್‌ಟಿಎಸ್ ಕಂಪನಿ ಅಧಿಕಾರಿಗಳ ಅಸಡ್ಡೆತನ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಗೊಂದಲ.
ಕುಲಗೆಡಿಸಿತು ಬಿಆರ್‌ಟಿಎಸ್: ಅವಳಿ ನಗರದ ಮಧ್ಯೆ ಸುಗಮ ಸಂಚಾರಕ್ಕೆ ಅನುಕೂಲ ಆಗಲಿ ಎಂದು ಮೊದಲು ಚತುಷ್ಪಥ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಇದ್ದಕ್ಕಿದ್ದಂತೆಯೇ 2010ರ ಕೇಂದ್ರ ನಗರ ಭೂ ಸಾರಿಗೆ ಇಲಾಖೆ ಅವಳಿ ನಗರದ ಮಧ್ಯೆ ವಿಶ್ವಬ್ಯಾಂಕ್ ಹಣಕಾಸು ನೆರವಿನೊಂದಿಗೆ ಬಸ್ ರ್ಯಾಪಿಡ್ ಟ್ರಾನ್ಸಿಸ್ ಸಿಸ್ಟಮ್ ಜಾರಿಗೆ ತರುವ ಪ್ರಸ್ತಾಪ ಮಂಡಿಸಿತು. ಆದರೆ, ಅಷ್ಟೊತ್ತಿಗಾಗಲೇ ಚತುಷ್ಪಥ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಮೂಲ ಚತುಷ್ಪಥ ಯೋಜನೆಗೆ ಬಿಆರ್‌ಟಿಎಸ್ ಯೋಜನೆ ಸೇರ್ಪಡೆಯಾಗಲಿರುವ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿ ಇಂದಿಗೂ ಪೂರ್ತಿಯಾಗುತ್ತಿಲ್ಲ. ಜನರಿಗೆ ಅನುಕೂಲವಾಗಲಿ ಮೊದಲು ಚತುಷ್ಪಥವನ್ನಾದರೂ ನಿರ್ಮಿಸಿ ಎಂದರೆ ಬಿಆರ್‌ಟಿಎಸ್ ಕಂಪನಿ ಅಧಿಕಾರಿಗಳು ಕೇಳುತ್ತಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೂಡ ಮೊದಲು ಚತುಷ್ಪಥ ನಿರ್ಮಾಣ ಕೆಲಸ ಮುಗಿಸಿ ಎಂದು ಹೇಳಿದ್ದರು. ಆದರೆ, ಬಿಆರ್‌ಟಿಎಸ್ ಅಧಿಕಾರಿಗಳಿಂದ ಕೇಳಿ ಬರುವ ಮಾತುಗಳೇ ಬೇರೆ, ಚತುಷ್ಪಥ ಪೂರ್ಣಗೊಳಿಸಬೇಕು ಎಂದರೆ ರಸ್ತೆ ಬದಿ ಟೆಲಿಫೋನ್, ವಿದ್ಯುತ್ ಕಂಬಗಳು ಮತ್ತು ಒಳಚರಂಡಿ ಪೈಪ್‌ಲೈನ್ ಸ್ಥಳಾಂತರಿಸಬೇಕು. ಬಿಆರ್‌ಟಿಎಸ್ ಯೋಜನೆ ಜಾರಿಗೊಳಿಸಬೇಕಾದರೆ ಮತ್ತೊಂದು ಬಾರಿ ಟೆಲಿಫೋನ್, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಒಟ್ಟಾರೆ ಒಂದು ಕೆಲಸ ಎರಡು ಬಾರಿ ಮಾಡಬೇಕಾಗುತ್ತದೆ. ಅಲ್ಲದೇ ಬಿಆರ್‌ಟಿಎಸ್‌ಗೆ ಅಗತ್ಯ ಭೂಮಿ ಭೂಸ್ವಾಧೀನ ಪೂರ್ಣಗೊಂಡಿದ್ದಲ್ಲಿ ಈ ಸಮಸ್ಯೆ ಬರುತ್ತಿರಲಿಲ್ಲ.
ಮೂರು ವರ್ಷಗಳಿಂದ ಕುಂಟುತ್ತ ಸಾಗಿರುವ ಯೋಜನೆ ವಿರುದ್ಧ ಜನರಲ್ಲಿ ಆಕ್ರೋಶ ಮಡುಗಟ್ಟುತ್ತಿದೆ. ಮೊದಲು ಚತುಷ್ಪಥವನ್ನಾದರೂ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಿ. ಅದು ಇರೋ ವ್ಯವಸ್ಥೆಯನ್ನು ಹಾಳು ಮಾಡಿ ಸಮಸ್ಯೆ ಹುಟ್ಟು ಹಾಕಬೇಡಿ ಎನ್ನುತ್ತಾರೆ. ಜನಪ್ರತಿನಿಧಿಗಳಲ್ಲೂ ಯೋಜನೆ ಬಗ್ಗೆ ಅಸಮಾಧಾನವಿದ್ದು, ಚತುಷ್ಪಥ ಯೋಜನೆಯೊಂದಿಗೆ ಬಿಆರ್‌ಟಿಎಸ್ ಸೇರಿಸಬೇಡಿ ಎನ್ನುತ್ತಿದ್ದಾರೆ.
ಜನಪರ ಸಂಘಟನೆಗಳು, ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದಿರುವ ಬಿಆರ್‌ಟಿಎಸ್ ಕೊನೆಗೂ ಚತುಷ್ಪಥ ಪೂರ್ಣಗೊಳಿಸುವ ಭರವಸೆ ನೀಡಿದ್ದು, ಇನ್ನೆರಡು ತಿಂಗಳ ಅವಧಿಯಲ್ಲಿ ತಾಜ್ ಗೇಟ್‌ವೇದಿಂದ ಧಾರವಾಡ ಗಾಂಧಿ ವೃತ್ತದವರೆಗೆ ಚತುಷ್ಪಥ ರಸ್ತೆ ಪೂರ್ಣಗೊಳಿಸಲಾಗುವುದು ಎಂದು ಮಾತು ನೀಡಿದ್ದಾರೆ.
ರು. 170 ಕೋಟಿ ವೆಚ್ಚದ 23 ಕಿ.ಮೀ. ಉದ್ದದ ಹು-ಧಾ ಚತುಷ್ಪಥ ನಿರ್ಮಾಣ ಕಾಮಗಾರಿ ಕೇವಲ 7 ಕಿ.ಮೀ. ಮಾತ್ರ ಪೂರ್ಣಗೊಂಡಿದೆ, ಬಾಕಿ ಉಳಿದಿರುವ 16 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ ಕೆಲಸ ಆರಂಭಿಸಬೇಕಿದೆ.