ಇಂದು ಹಿರಿಯ ನಾಗರಿಕರಿಗೆ ಸೌಲಭ್ಯಗಳ ಮಾಹಿತಿ
ಧಾರವಾಡ: ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಅ. 11ರಿಂದ 15 ದಿನಗಳ ವರೆಗೆ ಜಿಲ್ಲೆಯ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಭಾಸ ಬಬ್ರುವಾಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಸಂಸ್ಥೆಯ ಮಾನಸಿಕ ಆರೋಗ್ಯ ಮತ್ತು ವೃದ್ಧರು ಎಂಬ ಘೋಷಣೆಯಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬಗಳ ಪ್ರಮಾಣ ಕ್ಷೀಣಿಸುತ್ತ ಬರುತ್ತಿದೆ. ಇದರಿಂದ ವಯಸ್ಸಾದ ತಂದೆ-ತಾಯಿ ಮಾತ್ರ ಮನೆಯಲ್ಲಿ ಉಳಿಯುತ್ತಿದ್ದಾರೆ. ಅವರ ಮಕ್ಕಳು ದುಡಿಮೆಗಾಗಿ ಬೇರೆ ಕಡೆ ಹೋಗುವುದರಿಂದ ಮನೆಯಲ್ಲಿ ಉಳಿಯುವ 60 ವರ್ಷ ಮೀರಿದ ಹಿರಿಯ ನಾಗರಿಕರ ಕ್ಷೇಮ ವಿಚಾರಿಸಲು ಯಾರೂ ಇಲ್ಲದಂತಾಗಿದೆ. ಹೀಗಾಗಿ, ಹಿರಿಯರು ದೈಹಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಮಾನಸಿಕವಾಗಿ ಖಿನ್ನತೆಗೊಳಗಾಗುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅಂತಹ ಹಿರಿಯ ನಾಗರಿಕರ ಯೋಗಕ್ಷೇವು ನೋಡಿಕೊಳ್ಳಲು ಇಲಾಖೆ ಸ್ವಯಂ ಸೇವಾ ಸಂಸ್ಥೆ ಮೂಲಕ ಗುರುತಿನ ಚೀಟಿ ನೀಡಿ, ಸರ್ಕಾರದ ಸವಲತ್ತುಗಳನ್ನು ಒದಗಿಸಲು ಶ್ರಮಿಸಲಾಗುವುದು ಎಂದರು.
ಈ ಅವಧಿಯಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಆಪ್ತ ಸಮಾಲೋಚನೆ, ಸರ್ಕಾರದ ಸೌಲಭ್ಯಗಳು, ಉಚಿತ ಕಾನೂನು ನೆರವು, ಉಚಿತ ಚಿಕಿತ್ಸೆ ಕೂಡ ನೀಡಲಾಗುವುದು ಎಂದರು. ಪರಿಮಳಾ ಮುಗದ, ಎಲ್.ಎಸ್. ಅಂಬಲಿ ಇದ್ದರು.