ಸಿದ್ಧರಾಮೇಶ್ವರ ಚರಿತ್ರೆ ಕೃತಿ ಮುಟ್ಟುಗೋಲಿಗೆ ಆಗ್ರಹ
ಧಾರವಾಡ: ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರ ಕುರಿತು ಸಿದ್ಧರಾಮೇಶ್ವರ ಚರಿತ್ರೆ ಗ್ರಂಥದಲ್ಲಿ ಅವಹೇಳನಕಾರಿಯಾಗಿ ಬರೆದು ಬಸವಾದಿ ಶರಣರನ್ನು ಅವಮಾನಿಸಿದ ಕ್ರಮವನ್ನು ಖಂಡಿಸಿ ರಾಷ್ಟ್ರೀಯ ಬಸವದಳದ ವತಿಯಿಂದ ಇಲ್ಲಿಯ ಆಲೂರು ವೆಂಕಟರಾವ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ಗ್ರಂಥದಲ್ಲಿ ಬಸವಣ್ಣ, ಅಲ್ಲಮಪ್ರಭುದೇವ, ಅಕ್ಕಮಹಾದೇವಿ, ಅಕ್ಕನಾಗಮ್ಮ ಸೇರಿದಂತೆ ಇನ್ನೂ ಹಲವಾರು ಬಸವಾದಿ ಶರಣರ ಕುರಿತು ಅವಹೇಳನ ಪದ ಬಳಸಿರುವುದರಿಂದ ಬಸವ ಭಕ್ತರಿಗೆ ನೋವುಂಟಾಗಿದೆ. ಈ ಹಿನ್ನೆಲೆಯಲ್ಲಿ ಕೃತಿಯನ್ನು ನಿಷೇಧ ಮಾಡಬೇಕು ಹಾಗೂ ಮುಟ್ಟುಗೋಲು ಹಾಕಬೇಕು. ಇದು ಬಸವಾದಿ ಶರಣರಿಗೆ ಮಾತ್ರ ಮಾಡಿದ ಅಪಮಾನವಲ್ಲ. ಬದಲಾಗಿ ಮೂಲ ಕತೃ ರಾಘವಾಂಕನಿಗೂ ಮಾಡಿದ ದ್ರೋಹ. ಈ ಪುಸ್ತಕದಲ್ಲಿ ಪಂಚಪೀಠ ಶ್ರೀಗಳಾದ ಉಜ್ಜಿನಿ ಶ್ರೀಗಳ ಭಾವಚಿತ್ರ ಇರುವುದು ನಮ್ಮಲ್ಲಿ ಹಲವಾರು ಸಂಶಯ ಹುಟ್ಟುಹಾಕಿದೆ. ಆದ್ದರಿಂದ, ಇದನ್ನು ಕೂಡಲೇ ಮುಟ್ಟುಗೋಲು ಹಾಕಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಅಕ್ಕಮಹಾದೇವಿ ಆಶ್ರಮದ ಗಂಗಾ ಮಾತಾಜಿ, ಸಿದ್ದಣ್ಣ ನಟೆಗಲ್, ಮಹಾದೇವ ನ್ಯಾಮತಿ, ನಿಲಾಂಬಿಕಾ ಇಂಗಳಹಳ್ಳಿ, ಶಾಂತಕ್ಕ ಕುಸುಗಲ್, ಸುಜಾತಾ ಯರಗಟ್ಟಿ, ಕೆ.ಎಸ್. ಕೋರಿಶೆಟ್ಟರ, ಮಂಜುನಾಥ ಅಂಗಡಿ, ಚಂದ್ರಮ್ಮ ಸದಾನಂದಸ್ವಾಮಿ, ಶಿವಾನಂದ ಅಬಲೂರ, ಪ್ರಕಾಶ ಗರಗ, ಸಿ.ಎ. ಕೂಸಪ್ಪನವರ ಇದ್ದರು.