ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ
ಧಾರವಾಡ: ಇಲ್ಲಿನ ಗಾಂಧಿನಗರದಲ್ಲಿ ಗಣೇಶ ವಿಸರ್ಜನೆಗೆ ನಿರ್ಮಿಸಿದ್ದ ನೀರಿನ ಕೃತಕ ಹೊಂಡದಲ್ಲಿ ಬಿದ್ದು ಸಾವಿಗೀಡಾದ ಸಹೋದರರ ಕುಟುಂಬಕ್ಕೆ ಪರಿಹಾರ ನೀಡದ ಸರ್ಕಾರದ ಕ್ರಮ ಖಂಡಿಸಿ ಧಾರವಾಡ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಅಸೋಶಿಯೇಶನ್ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.
ಆಟೋ ಚಾಲಕ ಪ್ರಕಾಶ ಮುಳಗುಂದ ಅವರ ಇಬ್ಬರು ಮಕ್ಕಳಾದ ಪ್ರಜ್ವಲ (6) ಮತ್ತು ನಾಗರಾಜ (4) ನೀರಿನ ಹೊಂಡದಲ್ಲಿ ಬಿದ್ದು ಸಾವಿಗೀಡಾಗಿದ್ದರು. ಮಕ್ಕಳನ್ನು ಕಳೆದುಕೊಂಡಿರುವ ಪ್ರಕಾಶ ಮುಳಗುಂದ ಬಡವರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ, ಪ್ರಕಾಶ ಮುಳಗುಂದಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಟುಂಬಕ್ಕೆ ಶೀಘ್ರವೇ ಪರಿಹಾರ ನೀಡಬೇಕು. ಜೊತೆಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜೀವನ ಹುತ್ಕುರಿ, ಶೇಖರಯ್ಯ ಮಠಪತಿ, ಎಂ.ಎಂ. ಬೇಪಾರಿ, ರಸೂಲ ನದಾಫ್, ಲಕ್ಷ್ಮಣ ಜಮನಾಳ, ಸಾಯಿರಾಮ ಕಾಳೆ, ವಿವಿಧ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ದೊಡ್ಡಮನಿ, ಸಿಡ್ಲೆಪ್ಪ ಹೆಗಡೆ, ಯಲ್ಲಪ್ಪ ಮಂಟೂರ, ನಾರಾಯಣ ಮಾದರ, ಶಬ್ಬೀರ ಅತ್ತಾರ, ನಾಗರಾಜ ಹಟ್ಟಿಹೊಳಿ ಇದ್ದರು.