ತಾಪಂ ಸಭೆ: ಅಧಿಕಾರಿಗಳ ತರಾಟೆ
ಧಾರವಾಡ: ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ತಾಲೂಕು ಪಂಚಾಯ್ತಿ ಸದಸ್ಯರು ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ತಾಪಂ ಸದಸ್ಯರು, ಜನರು ವಿದ್ಯುತ್ ಸರಬರಾಜು ಮಾಡುವ ಹೆಸ್ಕಾಂನ್ನು ದೇವರೆಂದು ಭಾವಿಸಿದ್ದಾರೆ. ಪ್ರಸ್ತುತ ವಿದ್ಯುತ್ ಸಮಸ್ಯೆಯಿಂದ ಜನತೆ ನಾನಾ ತೊಂದರೆ ಅನುಭವಿಸುವಂತಾಗಿದೆ. ಅನೇಕ ಗ್ರಾಮಗಳಲ್ಲಿ ಹಳೆ ವಿದ್ಯುತ್ ಕಂಬಗಳಿದ್ದು, ಜೀವಕ್ಕೆ ಅಪಾಯ ತರುವಂತಿವೆ. ಅಧಿಕಾರಿಗಳು ತಮ್ಮ ಕಾರ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸದ್ಯ ಅಮ್ಮಿನಬಾವಿ, ಕರಡಿಗುಡ್ಡ, ಮಾರಡಗಿ ಸೇರಿದಂತೆ ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಸ್ಥರು ವಿದ್ಯುತ್ ಸಮಸ್ಯೆ ಬಗೆಹರಿಸುವವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಕಳೆದ ಸಭೆಯಲ್ಲಿ ಈ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಇದುವರೆಗೆ ಈ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲಾಗಿಲ್ಲ. ಹೆಸ್ಕಾಂ ಅಧಿಕಾರಿಗಳ ವಿಳಂಬ ನೀತಿಯಿಂದ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ದೂರುವಂತಾಗಿದೆ ಎಂದು ತಾಪಂ ಸ್ಥಾಯಿ ಸಮಿತಿ ಕೃಷ್ಣಾ ಕೊಳ್ಳಾನಟ್ಟಿ ಆರೋಪಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ, ಪ್ರಸ್ತುತ ತಾಲೂಕಿನ ಕೆಲ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇನ್ನು, ತಾಂತ್ರಿಕ ಕಾರಣದಿಂದ ಕೆಲ ವೇಳೆ ವಿದ್ಯುತ್ ಪೂರೈಕೆಯಲ್ಲಿ ಕೊಂಚ ವಿಳಂಬವಾಗುತ್ತಿದೆ. ಹಾಗೆಯೇ, ವಿದ್ಯುತ್ ಬಿಲ್ ತುಂಬದವರಿಗೆ ಈಗಾಗಲೇ ಕಾಲಾವಕಾಶ ನೀಡಲಾಗಿತ್ತು. ಆದರೂ ಸೂಕ್ತ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಗದಿ ಗ್ರಾಮದಿಂದ ಬಾಡ ವರೆಗೆ ಕೈಗೊಂಡ 3 ಕಿ.ಮೀ ಕಾಮಗಾರಿಯಲ್ಲಿ ಕೇವಲ 1.5 ಕಿ.ಮೀ ಮಾತ್ರ ರಸ್ತೆಯಾಗಿದೆ. ಇದಕ್ಕೆ ನಿಗದಿ ಪಡಿಸಿದ ಹಣ ಎಲ್ಲಿ ಹೋಯ್ತು ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕುತ್ತರಿಸಿದ ಸಹಾಯಕ ಎಂಜಿನಿಯರ್ ಎಸ್.ಎನ್. ಗೌಡರ, ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ಕಾಂಕ್ರಿಟ್ ರಸ್ತೆ ಮಾಡಲಾಗಿದ್ದು, ಕಾಮಗಾರಿ ಅರ್ಧದಷ್ಟು ಹಣವನ್ನು ಗ್ರಾಮದ ಬೇರೊಂದು ಕಾಮಗಾರಿಗೆ ಬಳಕೆ ಮಾಡಲಾಗಿದ್ದು, ಬರುವ ದಿನಗಳಲ್ಲಿ ಉಳಿದ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಳಿಕ ನೀರಿನ ಸಮಸ್ಯೆ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ತಾಪಂ ಅಧ್ಯಕ್ಷೆ ರತ್ನವ್ವ ಕಳ್ಳಿಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಬಂಡಿ, ತಾಪಂ ಸಮಸ್ಯರಾದ ಯೋಗೀಶಗೌಡ ಗೌಡರ, ಮಂಜುಳಾ ಕೇಶಗೊಂಡ, ಸುಮಂಗಲಾ ಕೌದೆಮ್ಮಣ್ಣವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.