ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆರೆಸ್ಸೆಸ್‌ನಿಂದ ವಿವೇಕಾನಂದರ ಕನಸು ನನಸು

Mainashree
Updated On : 15 Oct 2013, 12:01 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 14
ಸ್ವಾಮಿ ವಿವೇಕಾನಂದರ ಕನಸಿನ ಭವ್ಯ ಭಾರತದ ನಿರ್ಮಾಣ ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರ್ಯ ಮಾಡುತ್ತಿದೆ ಎಂದು ಸಂಘದ ದಕ್ಷಿಣ ಮಧ್ಯ ಬೌದ್ಧಿಕ ಪ್ರಮುಖ ವಿ. ನಾಗರಾಜ ಹೇಳಿದರು.
ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸೋಮವಾರ ಆಯೋಜಿಸಿದ್ದ ಗಣವೇಷಧಾರಿಗಳ ಪಥಸಂಚಲನದ ನಂತರ ನಗರದ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕವಾಗಿ ಜಾಗೃತಗೊಂಡ, ಆರ್ಥಿಕವಾಗಿ ಶಕ್ತಿಯುತ ಹಾಗೂ ಸಾಮಾಜಿಕವಾಗಿ ಭದ್ರಗೊಂಡ ಭಾರತ ನಿರ್ಮಾಣ ಸ್ವಾಮಿ ವಿವೇಕಾನಂದರ ಕನಸಾಗಿತ್ತು. ಸ್ವದೇಶಿ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡುವ ಜತೆಗೆ ಆಮದು ನಿಯಂತ್ರಿಸಿ, ರಫ್ತು ಹೆಚ್ಚಿಸಿದರೆ ದೇಶ ಆರ್ಥಿಕವಾಗಿ ಬಲಗೊಳ್ಳುತ್ತದೆ.
ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವ ಹಾಗೂ ಅವಹೇಳನ ಮಾಡುವ ಸಂಗತಿಗಳು ಇತ್ತೀಚಿನ ದಿನಗಳಲ್ಲಿ ನಿರಂತರ ನಡೆಯುತ್ತಿವೆ. ಭಾರತೀಯರ ಆರಾಧ್ಯ ದೈವ ಗಣಪತಿಯನ್ನು ವಿಕೃತವಾಗಿ ಚಿತ್ರಿಸಿದ್ದನ್ನು ಬುದ್ಧಿಜೀವಿಗಳೆನಿಸಿಕೊಂಡವರು ಸಮರ್ಥಿಸಿಕೊಂಡಿರುವುದು ಖೇದಕರ. ಹಿಂದು ಸಮಾಜದ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿರುವುದು ಸರಿ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಪ್ರತಿಯೊಬ್ಬನ ಜೀವನಮಟ್ಟ ಸುಧಾರಿಸಬೇಕು. ವ್ಯಕ್ತಿತ್ವ ವಿಕಸನಗೊಳ್ಳಬೇಕು. ಪ್ರತಿಯೊಬ್ಬರೂ ಸಮಾಜಕ್ಕಾಗಿ ತಮ್ಮಿಂದಾಗುವ ಸಹಾಯ ಮಾಡಬೇಕು. ದುಷ್ಟಶಕ್ತಿಯ ನಾಶವಾಗಬೇಕು. ಉದಾತ್ತ ಶಕ್ತಿಗಳು ನಿರ್ಮಾಣಗೊಳ್ಳಬೇಕು ಎಂದು ಹೇಳಿದರು.
ಉದ್ಯಮಿ ಶರಣಪ್ಪ ಹಗೇದಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಸೇವೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತ ಬಂದಿದೆ. ಯುವಕರಲ್ಲಿ ದೇಶಭಕ್ತಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.
ಹಿರಿಯ ವೈದ್ಯ ಗೋವಿಂದ ನರೇಗಲ್, ಸಂಸದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಂಗಾ ಬದ್ದಿ ಮತ್ತಿತರರು ಹಾಜರಿದ್ದರು.
ಭವ್ಯ ಪಥಸಂಚಲನ
ನೆಹರು ಮೈದಾನದಿಂದ ಎರಡು ತಂಡಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ಮೊದಲನೇ ತಂಡ ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ್ ಪೇಟ್, ಪೆಂಡಾರಗಲ್ಲಿ, ಶಂಕರಮಠ, ಕಂಚಗಾರ ಗಲ್ಲಿ, ಭೂಸಪೇಟ್, ಮಚಗಾರ ಓಣಿ, ಪಿಂಜಾರಗಲ್ಲಿ, ಶಿಂಪಿಗಲ್ಲಿ, ಸರಾಫಗಟ್ಟಿ ವೃತ್ತ, ಜವಳಿಸಾಲ, ಬೆಳಗಾಂವ ಗಲ್ಲಿ ಮುಖಾಂತರ ದುರ್ಗದಬೈಲ್ ಮುಖಾಂತರ ನೆಹರು ಮೈದಾನ ತಲುಪಿತು. ಮತ್ತೊಂದು ತಂಡ ಜಯಚಾಮರಾಜ ನಗರ, ಕೊಯಿನ್ ರಸ್ತೆ, ಸ್ಟೇಷನ್ ರಸ್ತೆ, ಬಂಡಿವಾಡ ಅಗಸಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟ್, ಘಂಟಿಕೇರಿ ಓಣಿ, ಅಗಸರ ಓಣಿ, ವೀರಾಪುರ ಓಣಿ, ಪಗಡಿ ಗಲ್ಲಿ ಸರ್ಕಲ್, ರಾಧಾಕೃಷ್ಣ ಗಲ್ಲಿ ಮುಖಾಂತರ ದುರ್ಗದ ಬೈಲ್‌ಗೆ ಆಗಮಿಸಿ, ಎರಡೂ ತಂಡದ ಸ್ವಯಂಸೇವಕರು ನೆಹರು ಮೈದಾನ ತಲುಪಿದರು. ಈ ಸಂದರ್ಭ ಮಾರ್ಗದುದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement