ಸುದ್ದಿ ಸಂಕ್ಷೇಪ
ಇಂದು ಸಾಂಸ್ಕೃತಿಕ ಭವನ ಉದ್ಘಾಟನೆ ಸಮಾರಂಭ
ಧಾರವಾಡ: ಇಲ್ಲಿನ ಕಿತ್ತೂರು ಚನ್ನಮ್ಮ ಪಾರ್ಕ್ ಬಳಿಯ ರೋಟ್ಸನ್ ಗಾರ್ಡನ್ ಅಸೋಸಿಯೇಶನ್ ವತಿಯಿಂದ ಅಪಾರ್ಟ್ಮೆಂಟ್ನಲ್ಲಿ ನಿರ್ಮಿಸಿದ ಸಾಂಸ್ಕೃತಿಕ ಭವನದ ಉದ್ಘಾಟನೆ, ವಾಣಿಜ್ಯ ಮಳಿಗೆಗಳ ಶಂಕುಸ್ಥಾಪನೆ ಸಮಾರಂಭ ಅ. 15ರ ಸಂಜೆ 6ಕ್ಕೆ ನಡೆಯಲಿದೆ. ಶಾಸಕ ಅರವಿಂದ ಬೆಲ್ಲದ ಸಾಂಸ್ಕೃತಿಕ ಭವನ ಉದ್ಘಾಟಿಸುವರು. ರೋಟ್ಸನ್ ಗ್ರೂಪ್ ಸಿಇಒ ಪಿ.ಡಿ. ರಾಯ್ಕರ್ ವಾಣಿಜ್ಯ ಮಳಿಗೆಗಳ ಶಂಕುಸ್ಥಾಪನೆ ನೆರವೇರಿಸುವರು. ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ವಿಜಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಪಾಲಿಕೆ ಸದಸ್ಯ ರಾಜು ಅಂಬೋರೆ, ಸಿಪಿಐ ರಾಮನಗೌಡ ಹಟ್ಟಿ ಆಗಮಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.
ಇಂದು ಬೆಳದಿಂಗಳ ನೋಡಾ ಸಮಾರಂಭ
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಬೇಂದ್ರೆ ಭವನದಲ್ಲಿ ಅ. 15ರ ಸಂಜೆ 6ಕ್ಕೆ ಬೆಳದಿಂಗಳ ನೋಡಾ ಸಮಾರಂಭ ನಡೆಯಲಿದೆ. ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನದ ಅಂಧ ಕಲಾವಿದರಾದ ಶಿವಕುಮಾರ ಎಚ್.ಬಿ., ದೇವಿಕಾ ಶಿವಕುಮಾರ ಭಾವಗೀತ ಗಾಯನ ಪ್ರಸ್ತುತಪಡಿಸುವರು. ಗೋವಿಂದಪ್ಪ ತಬಲಾ ಸಾಥ್ ನೀಡುವರು. ಅತಿಥಿಯಾಗಿ ಮಲ್ಲಪ್ಪ ಬಂಡಿ ಭಾಗವಹಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.
ಇಂದು ಎನ್ನೆಸ್ಸೆಸ್ ಶಿಬಿರ
ಧಾರವಾಡ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಅ. 15ರಿಂದ 21ರ ವರೆಗೆ ತಾಲೂಕಿನ ಮನಗುಂಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರ ನಡೆಯಲಿದೆ. ಮನಗುಂಡಿ ವಿರಕ್ತಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಸಚಿವ ಸಂತೋಷ ಲಾಡ್, ಶಾಸಕ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಗ್ರಾಪಂ ಅಧ್ಯಕ್ಷ ಕರೆಪ್ಪ ಎತ್ತಿನಗುಡ್ಡ ಮತ್ತಿತರರು ಭಾಗವಹಿಸುವರು ಎಂದು ಎನ್ನೆಸ್ಸೆಸ್ ಸಂಯೋಜಕ ನಾಗರಾಜ ಡಿ.ಎಲ್. ತಿಳಿಸಿದ್ದಾರೆ.
ಉಪನ್ಯಾಸ
ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದಲ್ಲಿ ಸತ್ಸಂಗ ನಿಮಿತ್ತ ಅ. 19ರ ಸಂಜೆ 6 ಗಂಟೆಗೆ ಸಿದ್ಧಾರೂಢರ ಉಪದೇಶ ಕುರಿತು ಉಪನ್ಯಾಸ ನಡೆಯಲಿದೆ. ಪ್ರಭುದೇವ ಹಿಪ್ಪರಗಿ ಉಪನ್ಯಾಸ ನೀಡುವರು. ಇದಕ್ಕೂ ಮುನ್ನ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಳುವಾದ ಬೈಕ್ ಪತ್ತೆ
ಧಾರವಾಡ: ಸಂಚಾರಿ ಪೊಲೀಸ್ ವೇಷದಲ್ಲಿ ಅಪರಿಚಿತನೊಬ್ಬ ಕದ್ದೊಯ್ದ ಬೈಕ್ ರೇಲ್ವೆ ಸ್ಟೇಶನ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಕಳೆದ ಶುಕ್ರವಾರ ಇಲ್ಲಿನ ರಜತಗಿರಿ ನಾಲ್ಕನೇ ಕ್ರಾಸ್ನಲ್ಲಿ ರಾಮಕೃಷ್ಣ ಜಂಬಗಿ ಎಂಬುವರ ಬೈಕ್ ಅಪಹರಿಸಲಾಗಿತ್ತು. ರಾಮಕೃಷ್ಣ ಜಂಬಗಿ ಅವರ ಮಗ ರಾಹುಲ್ ಜಂಬಗಿ ಬೈಕ್ ಮೇಲೆ ಹೊರಟಿದ್ದಾಗ ಸಂಚಾರಿ ಪೊಲೀಸ್ ವೇಷದಲ್ಲಿದ್ದ ಅಪರಿಚಿತ ವ್ಯಕ್ತಿ ಬೈಕ್ ತಡೆದು ದಾಖಲೆಯನ್ನು ಕೇಳಿದ್ದನು. ನಂತರ ಬೈಕ್ ಕೀಲಿ ಪಡೆದು ಪರಾರಿಯಾಗಿದ್ದನು. ಆಕಸ್ಮಿಕವಾಗಿ ಬೈಕ್ ಸೋಮವಾರ ಪತ್ತೆಯಾಗಿದೆ. ಆರೋಪಿ ಸಿಕ್ಕಿಲ್ಲ ಎಂದು ವಿದ್ಯಾಗಿರಿ ಠಾಣೆ ಪೊಲೀಸರು ತಿಳಿಸಿದ್ದಾರೆ.