ಮಾಲೀಕರ ಕೈಸೇರಿದ ರು. 10 ಲಕ್ಷ ಮೌಲ್ಯದ ಚಿನ್ನಾಭರಣ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 15
ಕಳ್ಳತನ ಪ್ರಕರಣಗಳಲ್ಲಿ ಚಿನ್ನಾಭರಣ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಕಳೆದುಕೊಂಡಿದ್ದ ಮಾಲೀಕರಿಗೆ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಅವರು ಚಿನ್ನಾಭರಣ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಮಂಗಳವಾರ ಮರಳಿಸಿದರು.
ಮಂಗಳವಾರ ಇಲ್ಲಿನ ಸಿಎಆರ್ ಮೈದಾನದಲ್ಲಿ ನಡೆದ ಐಡೆಂಫಿಕೇಷನ್ ಪೆರೆಡ್‌ನಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದ ಮಹಿಳೆಯರಿಗೆ ಅವರ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ಹಿಂದಿರುಗಿಸಲಾಯಿತು.
ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 12 ಸರಗಳ್ಳತನ ಪ್ರಕರಣಗಳ ಸಂಭವಿಸಿದ ಕುರಿತು ದೂರು ದಾಖಲಾಗಿತ್ತು. ಅವುಗಳ ಪೈಕಿ 8 ಪ್ರಕರಣ ಪತ್ತೆ ಹಚ್ಚಿ ಆರೋಪಿಗಳಿಂದ ಚಿನ್ನಾಭರಣ ಸೇರಿದಂತೆ ಒಟ್ಟು ರು. 10.48 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ, ಸರಗಳ್ಳತನ ಮತ್ತು ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ 56 ಪ್ರಕರಣ ದಾಖಲಾಗಿದ್ದು, ಅವುಗಳ ಪೈಕಿ 21 ಪ್ರಕರಣಗಳನ್ನು ಪತ್ತೆ 15 ಆರೋಪಿಗಳನ್ನು ಬಂಧಿಸಿ ಅವರಿಂದ ರು. 9.56 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಆದೇಶದಂತೆ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 17 ಕಳ್ಳತನ ಪ್ರಕರಣಗಳು ಕಳೆದ ಜನವರಿಯಿಂದ ದಾಖಲಾಗಿದ್ದು, 12 ಪ್ರಕರಣಗಳನ್ನು ಭೇದಿಸಿ 12 ಆರೋಪಿಗಳನ್ನು ಬಂಧಿಸಲಾಗಿದೆ. 8 ಪ್ರಕರಣಗಳಲ್ಲಿ ರು. 1.31 ಲಕ್ಷ ಮೌಲ್ಯದ ಸ್ವತ್ತನ್ನು ಮೂಲ ಮಾಲೀಕರಿಗೆ ಮರಳಿಸಲಾಗಿದೆ.
ಐಡೆಂಟಿಫಿಕೇಷನ್ ಪೆರೆಡ್ ಸಂದರ್ಭ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ, ಡಿಸಿಪಿ ಶ್ರೀನಾಥ ಜೋಶಿ, ಸುಭಾಷ ಗುಡಿಮನಿ, ಎಸಿಪಿಗಳಾದ ಎನ್.ಡಿ. ಬಿರ್ಜೆ, ಯಶೋಧಾ ಒಂಟಗೋಡಿ, ಎ.ಆರ್. ಬಡಿಗೇರ ಸೇರಿದಂತೆ ಹುಬ್ಬಳ್ಳಿ ನಗರ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.