ಅಂಧರ ಬಾಳಿಗೆ ಅಮರ ಸ್ನೇಹ ಬೆಳಕು
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 17
ಎಲ್ಲದಕ್ಕೂ ಇನ್ನೊಬ್ಬರ ಆಸರೆ ಇವರಿಗೆ ಬೇಕೇ ಬೇಕು. ಆದರೂ ಯಾರೊಬ್ಬರ ಆಸರೆ ಬಯಸದ ಇವರು, ತಮಗೆ ತಾವೇ ಆಸರೆಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡುತ್ತಿರುವುದು ಸಾಧನೆಯೇ ಸರಿ.
ಹೌದು...'ಅಂಧರೇ ಅಂಧರಿಗಾಗಿ ಅಂಧರಿಗೋಸ್ಕರ' ನಿರ್ಮಿಸಿಕೊಂಡ 'ಅಮರ ಸ್ನೇಹ' ಅಂಧರ ಸಂಸ್ಥೆ ಇದು. ಧಾರವಾಡದ ನವನಗರದಲ್ಲಿ ಸಂಸ್ಥೆಯನ್ನು ಅಂಧರೇ ಸ್ಥಾಪನೆ ಮಾಡಿದ್ದು, ಕಳೆದ ಎರಡು ವರ್ಷಗಳಿಂದ ಅಂಧರಿಗಾಗಿ ಗಣನೀಯ ಸೇವೆ ಸಲ್ಲಿಸುತ್ತಿದೆ. ಅಂಧರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಬೇಕು. ಅಂಧರಿಗೂ ಸಮಾಜದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವ ಹಕ್ಕು ಇದೆ ಎಂಬುವುದನ್ನು ತೋರಿಸುವ ನಿಟ್ಟಿನಲ್ಲಿ ಸ್ವತಃ ತಾವೇ ಈ ಸಂಸ್ಥೆ ಸ್ಥಾಪಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ನಡೆಸುತ್ತಿರುವುದು ವಿಶೇಷ. ಸಂಸ್ಥೆಯು ಕಳೆದ ಮಂಗಳವಾರ ಧಾರವಾಡದಲ್ಲಿ ಅಂಧರು ಉಪಯೋಗಿಸುವ ಬಿಳಿ ಕೋಲಿನ ಹಾಗೂ ದೃಷ್ಟಿ ದಿನವನ್ನೂ ಆಚರಿಸಿತು.
ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ವಿವಿಧ ಕಾಲೇಜುಗಳ ಅಂಧ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಇದುವರೆಗೂ ಸರ್ಕಾರದಿಂದ ಈ ಸಂಸ್ಥೆಗೆ ಒಂದು ರುಪಾಯಿ ಬಂದಿಲ್ಲ. ಸಂಸ್ಥೆ ಸದಸ್ಯರಾಗಿ ಕಾರ್ಯನಿರ್ವಹಿಸುವ ಎಲ್ಲರೂ ತಾವೇ ಹಣ ಸೇರಿಸಿ ಸಮಾಜದಲ್ಲಿನ ಅಂಧ ವಿದ್ಯಾರ್ಥಿಗಳಿಗೆ ಸೂಕ್ತ ಸಹಾಯ ಹಾಗೂ ಅವರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಹಾಗೆಯೇ, ಅಂಧರ ಈ ಸಂಸ್ಥೆ ವತಿಯಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಅಂಧ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
ಸಮಾಜ ಅಂಧರನ್ನು ಬೇರೆ ರೀತಿಯಿಂದಲೇ ಕಾಣುವುದು ಸಾಮಾನ್ಯ. ಸರ್ಕಾರ ಅಂಗವಿಕಲರಿಗಾಗಿ ಅನೇಕ ಯೋಜನೆ ಹಾಕಿಕೊಂಡಿದೆಯಾದರೂ, ಅಂಧರಿಗೆ ಸಮರ್ಪಕವಾಗಿ ಅವು ಮುಟ್ಟುತ್ತಿಲ್ಲ. ಆದ್ದರಿಂದ ಅಂಧರಿಗಾಗಿ ವಿಶೇಷ ಯೋಜನೆಯನ್ನು ಸರ್ಕಾರ ರೂಪಿಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಬ್ರೈಲ್ ಗ್ರಂಥಾಲಯ ಸ್ಥಾಪಿಸುವ ಮೂಲಕ ಅಂಧ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಬೇಕು. ಅಂಧ ಯುವತಿಯರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದ ಕಾರಣ ಅರ್ಧಕ್ಕೆ ವ್ಯಾಸಂಗ ನಿಲ್ಲಿಸುತ್ತಿದ್ದಾರೆ. ಅವರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಮೂಲಕ ಯುವತಿಯರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಂಧರು ಓಡಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಂಗವಿಕಲರಿಗೆ ನಗರದಲ್ಲಿ ಸಾರಿಗೆ ಕೋರಿಕೆ ನಿಲುಗಡೆ ಮಾಡುವಂತೆ ಮಾಡಬೇಕು. ಅಲ್ಲದೇ, ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಧ್ವನಿ ಮುದ್ರಿತ ಯಂತ್ರ ಅಳವಡಿಸಬೇಕು. ಬಸ್ ನಿಲ್ದಾಣಗಳಲ್ಲಿ ಬ್ರೈಲ್ ಲಿಪಿ ಫಲಕಗಳನ್ನು ಹಾಕಬೇಕಾದ ಆವಶ್ಯಕತೆಯಿದೆ ಎಂಬುದು ಸಂಸ್ಥೆಯ ಅಧ್ಯಕ್ಷ ನಿಂಗರಾಜ ಕಂಬ್ಳೆ ಒತ್ತಾಯ.
ಈಗಾಗಲೇ ಸಂಸ್ಥೆಯು ಸದಸ್ಯ ಹಾಗೂ ಅನೇಕ ದಾನಿಗಳ ಸಹಾಯದ ನೆರವಿನಿಂದ ಜಿಲ್ಲೆಯಲ್ಲಿ ಅಂಧ ಯುವತಿಯರಿಗಾಗಿ ಹಾಸ್ಟೆಲ್ ಸ್ಥಾಪನೆಯ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಗ್ರಂಥಾಲಯ ಸ್ಥಾಪಿಸುವ ವಿಚಾರವನ್ನು ಸಹ ಚಿಂತನೆ ನಡೆಸಿದೆ. ಸರ್ಕಾರ ಸಂಸ್ಥೆಯೊಂದಿಗೆ ಕೈ ಜೋಡಿಸುವ ಆವಶ್ಯಕತೆಯಿದೆ. ಪ್ರಸ್ತುತ ಸಂಸ್ಥೆ ಅಂಧರ ವಿವಿಧ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಸ್ಥೆ ವತಿಯಿಂದ ಕೈಲಾದಷ್ಟು ಅಂಧರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಲಾಗಿದೆ ಎಂದರು ನಿಂಗರಾಜ.
ಅಂಗವಿಕಲರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ, ಯೋಜನೆಗಳು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಅರ್ಹ ಫಲಾನುಭವಿಗಳು ಪರದಾಡುವಂತಾಗಿದೆ. ಆದ್ದರಿಂದ ಅಂಧ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಅವರ ವಿವಿಧ ಬೇಡಿಕೆಗಳನ್ನು ಹೆಚ್ಚು ಕಾಲಾವಧಿ ತೆಗೆದುಕೊಳ್ಳದೇ ಸೂಕ್ತ ವೇಳೆಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂಬುದು ಅಂಧರ ಒಕ್ಕೊರಲಿನ ಅಭಿಪ್ರಾಯ.
ಕಲ್ಮೇಶ ಪಟ್ಟಣದವರ