ಗಣಿ ಅಕ್ರಮದಿಂದ ರು. 16 ಸಾವಿರ ಕೋಟಿ ನಷ್ಟ: ಎಸ್.ಆರ್. ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 18
ಇದುವರೆಗೆ ನಡೆದ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಒಟ್ಟು ರು. 16 ಸಾವಿರ ಕೋಟಿ ಆರ್ಥಿಕ ನಷ್ಟದ ಕುರಿತು ಸಿಬಿಐ ತನಿಖೆ ಮಾಡಿಸಿ, ನಷ್ಟದ ಹಣ್ನ ಮರಳಿ ಪಡೆಯಬೇಕು ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಮೈಸೂರು ಮಿನರಲ್ಸ್ನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಸಚಿವ ಡಿ.ಕೆ. ಶಿವಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳಾದ ವಿ. ಉಮೇಶ, ಮಹೇಂದ್ರ ಜೈನ್, ಡಿ.ಎಸ್. ಅಶ್ವನಾಥ, ಜೀಜಾ ಹರಿಸಿಂಗ್, ಕೆ.ಎಸ್. ಮಂಜುನಾಥ, ಗಂಗಾರಾಮ ಬಡೆರಿಯಾ ಮತ್ತು ಇನ್ನ್ನಿತರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಲಿಕೇರಿಯಿಂದ 77.38 ಲಕ್ಷ ಮೆಟ್ರಿಕ್ ಟನ್, ಚೆನೈನಿಂದ 44.96, ಕಾಕಿನಾಡದಿಂದ 17.55, ಕಾರವಾರದಿಂದ 9.87, ಕೃಷ್ಣಪಟ್ಟಣಂನಿಂದ 1.11, ಮಂಗಳೂರನಿಂದ 66.55, ವಿಶಾಖಪಟ್ಟಣಂನಿಂದ 3.05 ಲಕ್ಷ ಮೆಟ್ರಿಕ್ ಟನ್ನಷ್ಟು ಅಕ್ರಮ ಅದಿರನ್ನು ರಫ್ತು ಮಾಡಲಾಗಿದೆ ಎಂದರು. ಐ.ಜಿ. ಪುಲ್ಲಿ, ಎಫ್.ಬಿ. ಹಬೀಬ ಹಾಜರಿದ್ದರು.