ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 18
ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಆಡಳಿತಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಶುಕ್ರವಾರ ನಗರದ ದಿಗಂಬರ ಜೈನ ಸಮಾಜ ಸೇರಿದಂತೆ ಸಮಾಜದ ವಿವಿಧ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರ ಹೆಸರನ್ನು ಸೇರಿಸಿ ಕ್ಷೇತ್ರದ ಖ್ಯಾತಿಗೆ ಮಸಿ ಬಳಿಯುವ ಯತ್ನವನ್ನು ದುಷ್ಟಶಕ್ತಿಗಳು ಮಾಡುತ್ತಿವೆ. ಕುತ್ಸಿತ ಮನೋಭಾವನೆಯೊಂದಿಗೆ ದ್ವೇಷ ಸಾಧಿಸುತ್ತಿರುವ ಮತಿಹೀನರ ನಡವಳಿಕೆಯನ್ನು ಕ್ಷೇತ್ರದ ಅಭಿಮಾನಿ ಬಳಗ ಖಂಡಿಸುತ್ತದೆ. ಧರ್ಮಸ್ಥಳ ಕ್ಷೇತ್ರ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ವಿನಾಕಾರಣ ಅರೋಪ ಮಾಡಿ ವ್ಯಕ್ತಿತ್ವದ ತೇಜೋವಧೆ ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜೈನ ಸಮಾಜದ ವಿವಿಧ ಮುಖಂಡರು, ಹಿಂದು ಸಮಾಜದ ಸ್ವಾಮೀಜಿಗಳು, ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಸದಾನಂದ ಡಂಗನವರ, ಕರವೇ ಅಧ್ಯಕ್ಷ ಅಮೃತ ಇಜಾರಿ, ದಿಗಂಬರ ಜೈನ ಸ್ವಾಮೀಜಿ, ಮಹೇಂದ್ರ ಸಿಂಘಿ, ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿದ್ದರು.