ಭೂದೇವಿಗೆ ಉಡಿ ತುಂಬಿದರು...
ಉಪ್ಪಿನ ಬೆಟಗೇರಿ: ರೈತರು ಮುಂಗಾರು ಹಂಗಾಮಿನ ಸುಗ್ಗಿ ಮುಗಿಸಿ, ಹೊಸ ಹುರುಪಿನೊಂದಿಗೆ ಹಿಂಗಾರಿ ಬಿತ್ತನೆ ಮಾಡುವ ಹೊತ್ತಿಗೆ ಸೀಗಿ ಹುಣ್ಣಿಮೆ ಆಗಮನ. ಇದೇ ವೇಳೆ ಭೂತಾಯಿಗೆ ಉಡಿ ತುಂಬಿ, ಚರಗಾ ಚೆಲ್ಲಿ, ರೈತರ ಈ ಹಬ್ಬ ಉತ್ತರ ಕರ್ನಾಟಕ ಭಾಗದ ರೈತ ಸಮುದಾಯದ ವಿಶೇಷ ಆಚರಣೆಗಳಲ್ಲೊಂದು. ಅದರಲ್ಲೂ ಧಾರವಾಡ ಮತ್ತು ಬೆಳಗಾವಿ ಜಿಲ್ಲೆ ರೈತರು ತಲ ತಲಾಂತರಗಳಿಂದ ಸೀಗಿ ಹುಣ್ಣಿಮೆಯನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸುತ್ತಾರೆ.
ಮುಂಗಾರಿನಲ್ಲಿ ಬೆಳೆದ ಹೆಸರು, ನವಣೆ, ಸಜ್ಜೆ, ಜೋಳ, ಅಲಸಂದಿ, ಶೇಂಗಾ, ಆಲೂಗಡ್ಡೆ, ಉದ್ದು, ಗುರೆಳ್ಳು, ಸೋಯಾಬಿನ್, ಎಳ್ಳು ಮುಂತಾದ ದವಸ ಧಾನ್ಯಗಳಿಂದ ಹುರಿದ ನವಣಿ ಅಕ್ಕಿಯ ಹೋಳಿಗೆ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಕೋಡಬಳೆ, ಚಕ್ಕಲಿ, ಮೊಸರು, ಜೋಳದ ಕಡಬು ಹಲವು ಬಗೆಯ ಪಲ್ಯ, ಚಟ್ನಿ ತಯಾರಿಸುತ್ತಾರೆ.
ಹೀಗೇ ನಾನಾ ಬಗೆಯ ತಿಂಡಿ ತಿನಿಸುಗಳೊಂದಿಗೆ ತಮ್ಮ ಬಂಧು ಬಳಗ ಮತ್ತು ಕುಟುಂಬದ ಸದಸ್ಯರೆಲ್ಲ ತಮ್ಮ ತಮ್ಮ ಹೊಲಗಳಿಗೆ ತೆರಳಿ ಬನ್ನಿ ಮರದ ಕೆಳಗೆ ಐದು ಕಲ್ಲುಗಳನ್ನಿಟ್ಟು, ಉತ್ತಮ ಇಳುವರಿ ಫಸಲು ನೀಡಿದ ಭೂಮಿ ತಾಯಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ, ಉಡಿ ತುಂಬಿ, ಮುಂಗಾರಿನಲ್ಲಿ ಬೆಳೆದ ಹೊಸ ಧಾನ್ಯಗಳಿಂದ ಸಿದ್ಧಪಡಿಸಿದ ವಿವಿಧ ಬಗೆಯ ಖಾದ್ಯಗಳು ಮತ್ತು ನೈವೇದ್ಯವನ್ನು ಹೊಲದ ತುಂಬೆಲ್ಲ ಚರಗಾ ಚೆಲ್ಲುವ ಮೂಲಕ ಬಂಗಾರದ ಬೆಳೆ ನೀಡಿದ ಭೂ ದೇವಿಗೆ ಧನ್ಯತಾ ಭಾವದೊಂದಿಗೆ ನಮಿಸಿ, ಮುಂಗಾರಿನಂತೆಯೇ ಹಿಂಗಾರು ಬೆಳೆಗಳಾದ ಕಡಲೆ, ಬಿಳಿ ಜೋಳ, ಗೋದಿ, ಹತ್ತಿ ಮುಂತಾದವುಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಉತ್ತಮ ಫಸಲನ್ನು ನೀಡುವಂತೆ ಪ್ರಾರ್ಥಿಸುತ್ತಾರೆ.
ಬಂಧುಗಳೆಲ್ಲ ಒಟ್ಟಾಗಿ ಕುಳಿತು ಸಿಹಿ ಊಟ ಸವಿದು, ಹಿರಿಯರು ಮುಂದಿನ ಮಳೆ, ಬೆಳೆಯ ಮಾತುಗಳಲ್ಲಿ ತೊಡಗಿದರೆ, ಕಿರಿಯರು ಗಾಳಿಪಟ, ಲಗೋರಿ, ಕಣ್ಣಾಮುಚ್ಚಾಲೆ ಮುಂತಾದ ಆಟಗಳನ್ನಾಡಿ ಸಂಭ್ರಮಿಸುತ್ತಾರೆ.
ಪ್ರಕಾಶ ಹೂಗಾರ