ಸುದ್ದಿ ಸಂಕ್ಷೇಪ
ಇಂದಿನಿಂದ ಎನ್ನೆಸ್ಸೆಸ್ ಶಿಬಿರ
ಗುಡಗೇರಿ: ಗ್ರಾಮದ ಫ.ಚ.ಮ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಅ. 19ರಿಂದ 25ರ ವರೆಗೆ ರಟ್ಟಿಗೇರಿ ಗ್ರಾಮದಲ್ಲಿ ಜರುಗಲಿದೆ. ಅಂದು ಸಂಜೆ 4ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಪ್ರಾಚಾರ್ಯ ಎನ್.ಎಚ್. ಮಾಯಕೊಂಡ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಸ್. ಶಿವಳ್ಳಿ ಉದ್ಘಾಟಿಸುವರು. ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ ಧ್ವಜಾರೋಹಣ ನೆರವೇರಿಸುವರು. ಗುಡಗೇರಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಅಂಗಡಿ ಪ್ರತಿಜ್ಞಾವಿಧಿ ಭೋಧಿಸುವರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ವೈ.ಎಂ. ಮುಗಳಿ, ಗೀತಾ ಸುತಾರ, ಯಲ್ಲವ್ವ ಕತ್ತಿ, ಮಲ್ಲನಗೌಡ ರಾಮನಗೌಡ್ರ, ರವಿರಾಜ ಬಸ್ತಿ, ವಿ.ಎನ್. ವಾಲಿ, ದಯಾನಂದ ಕುಂದೂರ, ಬಸವರಾಜ ಮತ್ತೂರ, ದೇವಪ್ಪ ಗೌಡಗೇರಿ ಗದಿಗೆಪ್ಪ ದಳಪತಿ, ನೀಲಪ್ಪ ಆಡಿ, ನೀಲಪ್ಪ ಗುಡೆನಕಟ್ಟಿ ರಾಜೇಂದ್ರ ಪಾಟೀಲ, ಹಾಜೇಸಾಬ್ ಹರಪ್ಪನಳ್ಳಿ, ಪ್ರಿಯಾ ಡಿ ನಾಯಕ್, ಎಫ್.ಎಂ. ಕರೂದಿ, ಎಸ್.ಎಫ್. ಬೆಂಗೇರಿ, ವೆಂಕನಗೌಡ ನಿಂಗೊಡ್ತಿ ರಮೇಶ ನಾಡಗೇರ , ವಾಸುದೇವ ಮುರಗಿ, ಪ್ರಕಾಶ ಜೋಶಿ ಹಾಗೂ ಮುಂತಾದವರು ಪಾಲ್ಗೊಳ್ಳುವರೆಂದು ಮಂಜುನಾಥ ಕೊಕ್ಕರಗುಂದಿ ಪ್ರಕಟಣೆ ತಿಳಿಸಿದ್ದಾರೆ.
ಧಾರವಾಡ: ರಾಧಾಕೃಷ್ಣ ನಗರಕ್ಕೆ ಬಸ್ ಪ್ರಾರಂಭ
ಧಾರವಾಡ: ನಗರದ ಸಿಬಿಟಿಯಿಂದ ರಾಧಾಕೃಷ್ಣ ನಗರಕ್ಕೆ ಹೊಸ ಬಸ್ ಸಂಚಾರ ಇತ್ತೀಚೆಗೆ ಪ್ರಾರಂಭವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಹೊಸದಾಗಿ ಪ್ರಾರಂಭಸಿರುವ ಕೆಲ ಹೊಸ ಅನುಸೂಚಿಗಳಿಗೆ ಅನ್ವಯಿಸಿ ಈ ಮಾರ್ಗದಲ್ಲಿ ನೂತನವಾಗಿ ಬಸ್ ಸಂಚರಿಸುತ್ತಿದೆ. ಸಿಬಿಟಿಯಿಂದ ಜ್ಯುಬಿಲಿ ಸರ್ಕಲ್, ಎಲ್ಐಸಿ, ಕರ್ನಾಟಕ ಕಾಲೇಜು, ಸಪ್ತಾಪುರ ಭಾವಿ, ಸ್ಪಂದನಾ ಆಸ್ಪತ್ರೆ, ಮಿಚಿಗಿನ್ ಕಾಂಪೌಂಡ್, ಸದಾಶಿವ ನಗರ, ಗಲಗಲಿ ಆಸ್ಪತ್ರೆ, ಚನ್ನಬಸವೇಶ್ವರ ನಗರ ಮಾರ್ಗವಾಗಿ ಪ್ರತಿದಿನ ಸುಮಾರು 18 ಬಾರಿ ಈ ಬಸ್ ರಾಧಾಕೃಷ್ಣ ನಗರಕ್ಕೆ ಸಂಚರಿಸಲಿದೆ.
ಬತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಕೊಡಿ
ಹಾನಗಲ್ಲ: ಜಾಗತಿಕ ಮಾರುಕಟ್ಟೆಯಲ್ಲಿ ಗೋವಿನಜೋಳದ ದರ ಕುಸಿತ ರೈತನನ್ನು ಸಂಕಷ್ಟಕ್ಕೆ ತಳ್ಳಿದ್ದು, ಸರ್ಕಾರ ಕೂಡಲೇ ಬತ್ತ ಹಾಗೂ ಗೋವಿನಜೋಳದ ಬೆಂಬಲ ಬೆಲೆ ಹೆಚ್ಚಿಸಿ, ಖರೀದಿ ಕೇಂದ್ರ ತೆರೆಯಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಆಗ್ರಹಿಸಿದ್ದಾರೆ. ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಬೆಲೆಯೂ ಇಳಿದಿದ್ದು, ಕಬ್ಬಿನ ದರ ಕುಸಿಯಲು ಕಾರಣವಾಗಿದೆ. ಸುವರ್ಣಭೂಮಿ ಫಲಾನುಭವಿಗಳಿಗೆ ಬಾಕಿ ಹಣವನ್ನು ಶೀಘ್ರ ಪಾವತಿಸದಿದ್ದರೆ ಕೃಷಿಕ ಸಮುದಾಯ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಸೇರ್ಪಡೆಗೆ ಅವಕಾಶ
ಧಾರವಾಡ: ಶಹರದ 24 ವಾರ್ಡ್ಗಳಲ್ಲಿ ಜಾತ್ಯತೀತ ಜನತಾ ದಳ ಪಕ್ಷದ ಸಂಘಟನಾತ್ಮಕ ಕಾರ್ಯ ಸದ್ಯದಲ್ಲಿಯೇ ಶುರುವಾಗಲಿದ್ದು, ಪಕ್ಷದ ಕುರಿತು ಹಾಗೂ ಪಕ್ಷದ ಸಿದ್ಧಾಂತಗಳ ಕುರಿತು ವಿಶೇಷ ಆಸಕ್ತಿ ಇರುವವರು ಪಕ್ಷಕ್ಕೆ ಸೇರಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ: 98447-12994 ಸಂಪರ್ಕಿಸಬಹುದು ಎಂದು ಪಕ್ಷದ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ಪತಂಜಲಿ ಯೋಗ ಶಿಬಿರ
ಧಾರವಾಡ: ಲಕ್ಷ್ಮಿ ನಗರದ ನಾಗರಿಕ ಹಿತರಕ್ಷಕ ಸಂಘದಿಂದ ಇಲ್ಲಿನ ವಿದ್ಯಾಗಿರಿ ಬಳಿಯ ಲಕ್ಷ್ಮಿ ನಗರದ ಸಿದ್ದಿ ವಿನಾಯಕ ಮಂದಿರದ ಆವರಣದಲ್ಲಿ ಅ. 20ರಿಂದ ಹತ್ತು ದಿನಗಳ ಕಾಲ ನಿತ್ಯ ಬೆಳಗ್ಗೆ 5.45ಕ್ಕೆ ಪತಂಜಲಿ ಯೋಗ ಶಿಬಿರ ಆಯೋಜಿಸಲಾಗಿದೆ. ಯೋಗ ಶಿಬಿರದಲಿ ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಾಯಾಮಾ, ಧ್ಯಾನ ತರಬೇತಿ, ಆರೋಗ್ಯ, ಮನಸ್ಸಿನ ಏಕಾಗ್ರತೆ, ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ: 98800-33581 ಸಂಪರ್ಕಿಸಬಹುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ತಾಳಿಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಪಿಂಜಾರ ಸಮಾಜದ ಸಭೆ
ಹುಬ್ಬಳ್ಳಿ: ಕುಂದಗೋಳ ತಾಲೂಕಿನ ನದಾಫ ಮತ್ತು ಪಿಂಜಾರ ಸಂಘದ ಸಭೆಯನ್ನು ಅ. 20ರಂದು ಬೆಳಗ್ಗೆ 11ಕ್ಕೆ ಕುಂದಗೋಳ ರೇಲ್ವೆ ಸ್ಟೇಷನ್ ಹತ್ತಿರ ಇರುವ ಉರ್ದು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ತಾಲೂಕು ಘಟಕದ ಅಧ್ಯಕ್ಷ, ಉಪಾಧ್ಯಕ್ಷ, ಜಿಲ್ಲಾ ಮತ್ತು ರಾಜ್ಯ ಪ್ರತಿನಿಧಿ ಆಯ್ಕೆ ಮಾಡಲಾಗುವುದು. ಸಭೆಯಲ್ಲಿ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಫ್.ಡಿ. ಹಳೇಮನಿ, ರಾಜ್ಯ ಸಂಘದ ಸದಸ್ಯ ಪಿ.ಬಿ. ನದಾಫ, ಜಿಲ್ಲಾ ನದಾಫ ಸಂಘದ ಅಧ್ಯಕ್ಷ ಪ್ರೊ. ಎಂ.ಎಂ. ನದಾಫ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.