ಸುದ್ದಿ ಸಂಕ್ಷೇಪ
ಮಧುಮೇಹ ತಪಾಸಣೆ ಶಿಬಿರ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ನ ಉಣಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅ.20ರಂದು ಬೆಳಗ್ಗೆ 11ಕ್ಕೆ ಬೆಂಗೇರಿ ವೆಂಕಟೇಶ ಕಾಲೋನಿಯಲ್ಲಿರುವ ರೋಟರಿ ಶಾಲೆಯಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶಿಬಿರ ಉದ್ಘಾಟಿಸುವರು. ಮಹಾನಗರ ಪಾಲಿಕೆ ಸದಸ್ಯ ಪಿ.ಕೆ. ರಾಯನಗೌಡ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನಪರಿಷತ್ಸದಸ್ಯ ನಾಗರಾಜ ಛಬ್ಬಿ ಮತ್ತು ಖ್ಯಾತಮಧುಮೇಹ ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಆಗಮಿಸುವರು.
ಉಚಿತ ನೇತ್ರ ತಪಾಸಣೆ ಶಿಬಿರ
ಹುಬ್ಬಳ್ಳಿ: ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ವತಿಯಿಂದ ಅ. 20ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಣಕಲ್ ಕ್ರಾಸ್ನಲ್ಲಿರುವ ದಿವ್ಯಜ್ಯೋತಿ ಆಸ್ಪತ್ರೆಯಲ್ಲಿ ಸಿವಿಲ್ ಎಂಜಿನಿಯರ್ಗಳಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಸಹಯೋಗದಲ್ಲಿ ಆಯೋಜಿಸಿರುವ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಹಿರಿಯ ನೇತ್ರ ತಜ್ಞ ಡಾ. ಶ್ರೀಧರ, ಡಾ. ಸಿದ್ದೇಶ ನೇತೃತ್ವದ ತಂಡ ನೇತ್ರ ತಪಾಸಣೆ ಮಾಡಲಿದೆ. ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ವತಿಯಿಂದ ಶಸ್ತ್ರಚಿಕಿತ್ಸೆ ಮತ್ತು ಕನ್ನಡಕಗಳ ಮೇಲೆ ರಿಯಾಯಿತಿ ನೀಡಲಾಗುವುದು.
ಕಿರಾಣಿ ಅಂಗಡಿ ಕಳ್ಳತನ
ಧಾರವಾಡ: ಕಿರಾಣಿ ಅಂಗಡಿ ಮತ್ತು ಬೇಕರಿಯಲ್ಲಿ ನಗದು ಹಾಗೂ ಇತರ ವಸ್ತುಗಳನ್ನು ಕಳ್ಳತನ ಮಾಡಿದ ಪ್ರಕರಣ ಸವದತ್ತಿ ರಸ್ತೆಯಲ್ಲಿನ ಮೃತ್ಯುಂಜಯ ನಗರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ. ಮುರುಘಾಮಠದ ಎದುರಿಗಿರುವ ಸಿದ್ಧನಗೌಡ ಪಾಟೀಲ ಎಂಬುವವರ ಮೃತ್ಯುಂಜಯ ಕಿರಾಣಿ ಸ್ಟೋರ್ಸ್ನಲ್ಲಿ ಕಳ್ಳತನವಾಗಿದೆ. ಅಂಗಡಿ ಮೇಲಿನಿಂದ ಒಳನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ ರು. 24 ಸಾವಿರ ನಗದು, ರು. 10 ಸಾವಿರ ಮೌಲ್ಯದ ಮಸಾಲೆ ಸಾಮಾನುಗಳು, ಸುಮಾರು ರು. 8 ಸಾವಿರ ಮೌಲ್ಯದ ಸಿಗರೇಟು, ಪಾನಮಸಾಲಾ ಮತ್ತು ಮೊಬೈಲ್ ಕರೆನ್ಸಿಗಳನ್ನು ದೋಚಿದ್ದಾರೆ. ಪಕ್ಕದ ಕೃಷ್ಣಾ ಪೂಜಾರ ಎಂಬುವಛಿರ ಮಂಜುನಾಥ ಬೇಕರಿಯಲ್ಲಿನ ರು. 8ರಿಂದ 10 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಎಸಿಪಿ ಎಸ್.ಎಚ್. ಕೇರಿ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿದ್ದರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ನಾಲ್ವರ ಸೆರೆ
ಧಾರವಾಡ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ತಾಲೂಕಿನ ಹನಮನಹಾಳ ಗ್ರಾಮದಲ್ಲಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಗ್ರಾಮದ ಸಮೀಪದ ಹೊಲವೊಂದರಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ, ರು. 1,475 ಮತ್ತು ಜೂಜಾಟ ಸಲಕರಣೆ ವಶಪಡಿಸಿಕೊಂಡಿದ್ದಾರೆ. ಪಿಎಸ್ಐ ಟಿ. ವೆಂಕಟಸ್ವಾಮಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.