ಕಾಯಕ ಮರೆತ ಸಂಚಾರಿ ಖಾಕಿ
ಹುಬ್ಬಳ್ಳಿ: ಅವಳಿ ನಗರದ ಸಂಚಾರಿ ವ್ಯವಸ್ಥೆ ಸರಿಪಡಿಸುವ ಕಾಯಕ ಮರೆತಿರುವ ಕಮಿಷನರೇಟ್ನ ಸಂಚಾರಿ ಪೊಲೀಸ್ ಸಿಬ್ಬಂದಿ, ದಂಡ ವಸೂಲಿಯನ್ನು ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ಸಂಚಾರಿ ಪೊಲೀಸರು ಸಂಚಾರಿ ವ್ಯವಸ್ಥೆ ಬಲಪಡಿಸುವುದನ್ನು ಬಿಟ್ಟು ಬೇರೆಲ್ಲ ಮಾಡುತ್ತಿದ್ದಾರೆ. ದಂಡ ವಸೂಲಿ ಮಾಡುವುದಕ್ಕೆ ಸೀಮಿತರಾಗಿದ್ದಾರೆ. ಸಂಚಾರಿ ಪೊಲೀಸರ ಈ ನಿಷ್ಕ್ರಿಯತೆ ನೇರವಾಗಿ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರಿಗೆ ಹೊರ ರಾಜ್ಯದ ಲಾರಿ ಚಾಲಕರಿಗೆ ಹೊರೆಯಾಗಿ ಪರಿಣಮಿಸಿದೆ. ಹಾದಿ ತಪ್ಪುವ ಹೊರ ರಾಜ್ಯದ ಲಾರಿ ಚಾಲಕರನ್ನು ಪೊಲೀಸರು ಶೋಷಿಸುತ್ತಿರುವುದು ನೋಡಿದರೆ ಹುಬ್ಬಳ್ಳಿ ನಾಗರಿಕರಿಗೆ ಪೊಲೀಸ್ ವ್ಯವಸ್ಥೆ ನೋಡಿ ಅಸಹ್ಯಪಡುವಂತಾಗಿದೆ.
ಕಾಟನ್ ಮಾರ್ಕೇಟ್ನಲ್ಲಿ ಲಾರಿ ಮತ್ತು ಇತರ ವಾಹನಗಳ ಪಾರ್ಕಿಂಗ್ಗೆ ಪ್ರತ್ಯೇಕ ವ್ಯವಸ್ಥೆ ಇದ್ದರೂ ಎಲ್ಲಿ ಬೇಕೆಂದರಲ್ಲಿ ಚಾಲಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಇಡೀ ರಸ್ತೆಯನ್ನು ಸಂಚಾರಕ್ಕೆ ಅಯೋಗ್ಯವನ್ನಾಗಿ ಮಾಡಿದ್ದಾರೆ. ಆದರೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಸಂಚಾರ ಸುಗಮವಾಗಿದೆಯೋ ಅಥವಾ ಹದಗೆಟ್ಟಿದೆಯೊ ಎಂದು ನೋಡದೆ ತಮ್ಮಷ್ಟಕ್ಕೆ ತಾವಿರುತ್ತಾರೆ.
ಹೆಲ್ಮೆಟ್ ಹಾಕಿಲ್ಲ, ಅದಿಲ್ಲ, ಇದಿಲ್ಲ ಎಂದು ಬೈಕ್ ಸವಾರರನ್ನು ಅಡ್ಡಗಟ್ಟಿ ನಿತ್ಯ ಲಕ್ಷಗಟ್ಟಲೆ ದಂಡ ವಸೂಲಿ ಮಾಡುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಹಳೇ ಬಸ್ ನಿಲ್ದಾಣದ ಹತ್ತಿರ ಮಾರ್ಗ ಮಾಹಿತಿ ನೀಡುವ ಫಲಕಗಳೇ ಇಲ್ಲ. ಆಟೋಗಳ ಅಟಾಟೋಪಕ್ಕೆ ಕಡಿವಾಣ ಹಾಕುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕು ಹಾಗೆ ತಿರುಗುವ ಎದುರಿನಿಂದ ಬರುವ ಬೈಕ್ ಮೇಲೆ ಸವಾರಿ ಮಾಡುವಂತೆ ಸಾಗುವ ಆಟೋಗಳನ್ನು ನೋಡಿ ಜನರಂತೂ ಬೇಸತ್ತು ಹೋಗಿದ್ದಾರೆ. ಆದರೂ ಪೊಲೀಸರಿಗೆ ಆಟೋದವರನ್ನು ನಿಯಂತ್ರಿಸಲಾಗುತ್ತಿಲ್ಲ.
ಪೊಲೀಸರಿಗೆ ಸಲ್ಲಿಕೆಯಾಗುವ ತಿಂಗಳ ಮಾಮೂಲಿ ದೃಶ್ಯ ಸರ್ವೇ ಸಾಮಾನ್ಯ. ಜಿಗಳೂರು ಕ್ರಾಸ್ ಬಳಿ, ಟಾಟಾ ಏಸ್ ವಾಹನ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ. ಈ ಬಗ್ಗೆ ಆತನಿಗೆ ಪ್ರಶ್ನಿಸಿದರೆ ಪ್ರತಿ ತಿಂಗಳು ಪೊಲೀಸರಿಗೆ ಮಾಮೂಲಿ ಕೊಡುತ್ತೇವೆ, ಆತ ಹೇಗೆ ಕೇಸ್ ಹಾಕುತ್ತಾನೆ ಎಂದು ಹೇಳಿದ್ದನ್ನು ಸ್ಮರಿಸಿದರೆ ಪೊಲೀಸರು ಅದ್ಹೇಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆಂಬುದಕ್ಕೆ ಸಾಕ್ಷಿ.
ಪೊಲೀಸರಿಗೆ ಹಬ್ಬ: ಹೊರ ರಾಜ್ಯದ ಲಾರಿಗಳು ದಾರಿ ತಪ್ಪಿದರೆ ಪೊಲೀಸರಿಗೆ ದೊಡ್ಡ ಹಬ್ಬವೇ ಆಗುತ್ತದೆ. ಭಾಷೆ ಬಾರದೆ, ಸಂಚಾರಿ ನಿಯಮ ಉಲ್ಲಂಘಿಸಿದ ಹೆದರಿಕೆಯಲ್ಲಿ ಇನ್ನೂ ಏನೇನು ಕಾದಿದೆಯೋ ಎಂಬ ಆತಂಕದಲ್ಲಿ ಪೊಲೀಸರು ಕೇಳುವಷ್ಟು ಹಣ ನೀಡಿ ತಮ್ಮ ದಾರಿ ಕಂಡುಕೊಳ್ಳುತ್ತಾರೆ. ಅವಳಿನಗರದಲ್ಲಿ ಸಂಚಾರ ವ್ಯವಸ್ಥೆಗೆ ಇಷ್ಟೊಂದು ಪೊಲೀಸರಿದ್ದರೂ ಏನು ಉಪಯೋಗ ಇಲ್ಲದಂತಾಗಿದೆ. ಒಂದು ಬಾರಿಯಾದರೂ ನಗರದ ವಾಹನ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸುವ ಗೋಜಿಗೆ ಹಿರಿಯ ಅಧಿಕಾರಿಗಳು ಹೋಗಿಲ್ಲ. ಬೆಂಗಳೂರಲ್ಲಿ ಅಳವಡಿಸಿದ ಸಂಚಾರ ವ್ಯವಸ್ಥೆಯನ್ನು ಅವಳಿ ನಗರದಲ್ಲೂ ಅಳವಡಿಸಿ ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು.
ಸಿಗ್ನಲ್ ಜಂಪ್: ಖಾಸಗಿ ವಾಹನಗಳು ಹೋಗಲಿ ಸರ್ಕಾರಿ ಬಸ್ ಚಾಲಕರೇ ನೇರಾ ನೇರ ಕೆಂಪು ದೀಪ ಇದ್ದರೂ ಸಿಗ್ನಲ್ ಜಂಪ್ ಮಾಡುತ್ತಿದ್ದಾರೆ. ಇದು ಖಾಸಗಿ ವಾಹನ ಚಾಲಕರಿಗೂ ಉತ್ತೇಜನ ನೀಡುತ್ತಿದೆ. ಟ್ರಾಫಿಕ್ ಪೊಲೀಸರು ಅಲ್ಲಿಯೇ ನಿಂತಿದ್ದರೂ ನಿಯಂತ್ರಿಸುವ ಗೊಡವೆಗೆ ಹೋಗುತ್ತಿಲ್ಲ.
ದೇಸಾಯಿ ಸರ್ಕಲ್ನಂತೂ ಟ್ರಾಫಿಕ್ ಜಾಮ್ ಪರಮಾವಧಿ ತಲುಪಿರುತ್ತದೆ. ಸ್ಟೇಷನ್ನಿಂದ ಬರುವ ಎಲ್ಲ ವಾಹನಗಳು ಸ್ಟೇಷನ್ ಕಡೆಗೆ ಹೋಗುವ ವಾಹನಗಳು ಹೋಗುವುದಕ್ಕೆ ಅವಕಾಶವಿರದಂತೆ ಸಿಗ್ನಲ್ ಕಾಯ್ದು ನಿಂತಿರುತ್ತವೆ. ಆದರೂ ಅಲ್ಲಿಯೇ ಇರುವ ಪೊಲೀಸ್ ಸಿಬ್ಬಂದಿ ಮಾತ್ರ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಸುಮ್ಮನಾಗುತ್ತಿದ್ದಾರೆ.
ಹಳೇ ಪಿ.ಬಿ. ರಸ್ತೆಯಲ್ಲಿ ವಾಹನಗಳ ವೇಗಕ್ಕೆ ಮಿತಿ ನಿಗದಿಪಡಿಸಿದೆ. ಆದರೆ ಅದೇ ರೀತಿ ಟ್ಯಾಕ್ಸಿ, ಕ್ರೂಸರ್ಗಳಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿ, ಎಲ್ಲಿ ಬೇಕೆಂದರಲ್ಲಿ ಅಲ್ಲಿ ವಾಹನ ನಿಲ್ಲಿಸುತ್ತ ಇಡೀ ರಸ್ತೆಯಲ್ಲಿ ವಾಹನ ಸಂಚಾರ ಹದಗೆಡುವಂತೆ ಮಾಡುತ್ತಿದ್ದು, ಈ ಕುರಿತು ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸ.
ಸಹಾಯಕ್ಕೆ ಬರುತ್ತಿಲ್ಲ: ಕಿತ್ತೂರ ಚನ್ನಮ್ಮ ವೃತ್ತದ ಗಣೇಶ ಹೊಟೇಲ್ ಮುಂದೆ ಜನ ರಸ್ತೆ ದಾಟುತ್ತಾರೆ. ಅಲ್ಲಿ ಪೊಲೀಸರಿದ್ದರೂ ಒಂದು ನಿಮಿಷವೂ ಜನರಿಗೆ ಸಹಾಯ ಮಾಡುವುದಿಲ್ಲ. ಇದಕ್ಕೆ ಹೊಂದಿಕೊಂಡೇ ಆಟೋ, ಟ್ಯಾಕ್ಸಿ ನಿಂತಿರುತ್ತವೆ. ಬಾಶೆಲ್ ಮಿಷನ್ ಹೈಸ್ಕೂಲ್ ಎದುರೂ ನೂರಾರು ಖಾಸಗಿ ಬಸ್, ಟ್ಯಾಕ್ಸಿಗಳು ನಿಲ್ಲುತ್ತವೆ. ಆದರೆ, ವ್ಯವಸ್ಥೆ ಸರಿಪಡಿಸದ ಪೊಲೀಸ್ ಸಿಬ್ಬಂದಿ ಮೊಬೈಲ್ನಲ್ಲಿ ಮಾತಾಡುತ್ತಲೋ, ಅಂಗಡಿಗಳ ಮುಂದೆ ಕುಂತು ಹರಟೆ ಹೊಡೆಯುತ್ತಿರುವುದು ವಿಪರ್ಯಾಸ. ಸಂಚಾರಿ ವ್ಯವಸ್ಥೆ ಸರಿಪಡಿಸದಿದ್ದರೆ ಜನ ಬೀದಿಗಿಳಿದು ಹೋರಾಟ ನಡೆಸುವುದರಲ್ಲಿ ಸಂದೇಹವೇ ಇಲ್ಲ.