ನ.8ರಿಂದ ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಹಿಂದೂ ಅಧಿವೇಶನ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಹಿಂದೂ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಹೊಸ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ನವೆಂಬರ್ 8, 9, 10ರಂದು ಅಧಿವೇಶನ ನಡೆಯಲಿದೆ. ಬಂಜಾರ ಸಮಾಜದ ಸೇವಾಲಾಲ್ ಸ್ವಾಮೀಜಿ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಮೂರು ದಿನಗಳ ಸಮಾವೇಶದಲ್ಲಿ ದೇಶದ ನಾನಾ ಮೂಲೆಯಿಂದ ವಿವಿಧ ಕ್ಷೇತ್ರದಲ್ಲಿ ಪರಿಣತಿ ಪಡೆದ ಹಾಗೂ ಎಲ್ಲ ಹಿಂದೂ ಸಂಘಟನೆಗಳ ಪ್ರಮುಖರು ಸೇರಿದಂತೆ ಸುಮಾರು 500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ ಹಾಗೂ ಶ್ರೀರಾಮ ಸೇನೆ ಅಧಿವೇಶನ ಆಯೋಜಿಸಿದ್ದ ಎಲ್ಲ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಸದುದ್ದೇಶವನ್ನು ಅಧಿವೇಶನ ಹೊಂದಿದೆ ಎಂದರು. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಪ್ರಮುಖ ಮೋಹನಗೌಡ, ರಮೇಶ ಶಿಂಧೆ, ಗಂಗಾಧರ ಕುಲಕರ್ಣಿ, ವೀಣಾ ಗೋಷ್ಠಿಯಲ್ಲಿದ್ದರು.