ಕಾರು ಪಲ್ಟಿ: ಮಗು ಸಾವು
ರೋಣ: ಚಾಲಕನ ನಿಯಂತ್ರಣ ತಪ್ಪಿದ ಕಾರ್ ಪಲ್ಟಿಯಾಗಿ ಬಾಲಕ ಸೃಜನ ಕುಲಕರ್ಣಿ (3) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನುಳಿದ ಮೂವರು ಗಾಯಗೊಂಡ ಘಟನೆ ತಾಲೂಕಿನ ಬಾಸಲಾಪುರ ಕ್ರಾಸ್ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಹುಬ್ಬಳ್ಳಿಯಿಂದ ಗಜೇಂದ್ರಗಡದಲ್ಲಿನ ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ಪವಮಾನ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ರಸ್ತೆಯಲ್ಲಿನ ಗುಂಡಿಯನ್ನು ತಪ್ಪಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತಕ್ಕೀಡಾದವರು ಹುಬ್ಬಳ್ಳಿಯ ಉಣಕಲ್ನ ಶ್ರೀನಗರ 3ನೇ ಕ್ರಾಸ್ ನಿವಾಸಿಗಳೆಂದು ತಿಳಿದು ಬಂದಿದ್ದು, ಗಾಯಾಳು ಅನಂತರಾವ್ ಉದ್ದಾರ, ಮುರಳಿ ಕುಲಕರ್ಣಿ, ಸುಜಾತಾ ಕುಲಕರ್ಣಿ ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು 108 ಆರೋಗ್ಯ ರಕ್ಷಾ ಕವಚ ವಾಹನ ಮೂಲಕ ರೋಣ ಪಟ್ಟಣದ ಪಂ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಿಪಿಐ ವೆಂಕಟಪ್ಪ ನಾಯಕ, ಪಿಎಸ್ಐ ಡಿ.ಬಿ.ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.