ಸುದ್ದಿ ಸಂಕ್ಷೇಪ
ಜಾನಪದ ನೃತ್ಯ ಸ್ಪರ್ಧೆ 27ಕ್ಕೆ
ಧಾರವಾಡ: 58ನೇ ರಾಜೋತ್ಸವ ಅಂಗವಾಗಿ ವಿದ್ಯಾವರ್ಧಕ ಸಂಘದ ಜಾನಪದ ಮಂಟಪವು ಅ. 27ರಂದು ಬೆಳಗ್ಗೆ 10.30ಕ್ಕೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿ, ಪರಂಪರೆ ಬಿಂಬಿಸುವ ಜಾನಪದ ನೃತ್ಯ ಸ್ಪರ್ಧೆ ಹಮ್ಮಿಕೊಂಡಿದೆ. ಆಸಕ್ತ ವಿದ್ಯಾರ್ಥಿಗಳು ಅ. 21ರೊಳಗಾಗಿ ಕಾಲೇಜಿನ ಪ್ರಾಚಾರ್ಯರಿಂದ ಪ್ರವೇಶ ಪತ್ರ ಪಡೆದುಕೊಂಡು ಸಂಘದ ಕಚೇರಿ ವೇಳೆಯಲ್ಲಿ ಹೆಸರು ನೋಂದಾಯಿಸಬೇಕು. ಅಲ್ಲದೇ, ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ ಎಂದು ಶಂಕರ ಕುಂಬಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಧಾರವಾಡ: ಇಲ್ಲಿನ ವಿದ್ಯಾಪೋಷಕ ಸಂಸ್ಥೆ 2013ರಲ್ಲಿ ದ್ವಿತೀಯ ಪಿಯುಸಿ ಪಾಸಾಗಿ ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗಾಗಿ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಸಿಇಟಿ ಪರೀಕ್ಷೆಯ ಎಂಜಿನಿಯರಿಂಗ್ ವಿಭಾಗದಲ್ಲಿ 7500ಕ್ಕಿಂತ ಕಡಿಮೆ, ವೈದ್ಯಕೀಯ ವಿಭಾಗದಲ್ಲಿ 1000ಕ್ಕಿಂತ ಕಡಿಮೆ ರ್ಯಾಂಕ್ ಪಡೆದ ಆರ್ಥಿಕವಾಗಿ ಬಡತನ ಹೊಂದಿದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅ. 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಮೊ: 88610-97093ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಆಕಸ್ಮಿಕ ಬೆಂಕಿ: ಎತ್ತು ಗಾಯ
ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ದನ ಕಟ್ಟುವ ಶೆಡ್ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಸುಟ್ಟಿದ್ದು, ಶೆಡ್ನಲ್ಲಿ ಕಟ್ಟಿದ್ದ ಒಂದು ಎತ್ತಿಗೆ ತೀವ್ರ ಗಾಯವಾಗಿದೆ. ಗ್ರಾಮದ ಪೂಜಾರ ಓಣಿ ನಿವಾಸಿ ಮಲ್ಲಪ್ಪ ದಾನಸೂರಗೆ ಸೇರಿದ ಶೆಡ್ಗೆ ಬೆಂಕಿ ಹತ್ತಿದ್ದು, ಎತ್ತಿನ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ರು. 25 ಸಾವಿರ ಹಾನಿಯಾಗಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಣ್ಣಿಗೇರಿ ವೃದ್ಧ ಕಣ್ಮರೆ
ಅಣ್ಣಿಗೇರಿ: ಸ್ಥಳೀಯ ಗಣೇಶನಗರದ ನಿವಾಸಿ ದಾವಲಸಾಬ ಹುಸೇನಸಾಬ ಮುಳಗುಂದ(72) ವೃದ್ಧ ಜು. 17ರಂದು ಬೆಳಗಿನ 9ರ ಸುಮಾರಿಗೆ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಈ ಬಗ್ಗೆ ದಾವಲಸಾಬನ ಮಗ ಮೆಹಬೂಬ ಮುಳಗುಂದ ಸ್ಥಳೀಯ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಕಾಣೆಯಾದ ವ್ಯಕ್ತಿ ಎತ್ತರ 5 ಅಡಿ, 2 ಅಂಗುಲ, ಸಾಧಾರಣ ಮೈಕಟ್ಟು, ಸಾದುಗಪ್ಪು ಮೈಬಣ್ಣ, ಬಿಳಿ ಮೀಸೆ ಗಡ್ಡ ಬಿಟ್ಟಿರುತ್ತಾನೆ. ಬಿಳಿ ಫುಲ್ಶರ್ಟ್, ಫುಲ್ ಬನಿಯನ್, ಕಪ್ಪು ಕಲರ್ ಪ್ಯಾಂಟ್ ಧರಿಸಿದ್ದು, ಕನ್ನಡ, ಉರ್ದು, ಹಿಂದಿ ಭಾಷೆ ಮಾತನಾಡುತ್ತಾನೆ. ಈ ವ್ಯಕ್ತಿ ಕಂಡುಬಂದಲ್ಲಿ ಸ್ಥಳೀಯ ಆರಕ್ಷಕ ಠಾಣೆಗೆ ಅಥವಾ ಅಣ್ಣಿಗೇರಿ ಠಾಣೆಯ ಫೋ.ನಂ. 08380-222733 ಸಂಪರ್ಕಿಸಲು ಕೋರಲಾಗಿದೆ.
ಧಾರವಾಡ: ಇಂದು ಸಮಾನತೆ ಕುರಿತು ವಿಚಾರ ಗೋಷ್ಠಿ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 20
ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಅ. 21ರಂದು ಸಂಜೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ವಿಚಾರಗೋಷ್ಠಿ ಹಮ್ಮಿಕೊಂಡಿದೆ. ಹೈಕೋರ್ಟ್ ವಕೀಲ ಡಾ. ಚಿದಾನಂದ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ. ಕವನ ದೇಶಪಾಂಡೆ ಭಾಗವಹಿಸಲಿದ್ದು, ಅತಿಥಿಗಳಾಗಿ ಬಸವರಾಜ ಕಟ್ಟಿಮನಿ ಆಗಮಿಸಲಿದ್ದಾರೆ. ಪ್ರೊ. ಶಿಲಾದಾರ ಮುಗಳಿ ಅಧ್ಯಕ್ಷತೆ ವಹಿಸುವರು ಎಂದು ಗುರು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೌಶಲ್ಯ ತರಬೇತಿಗೆ ಆಹ್ವಾನ
ಧಾರವಾಡ: ಇಲ್ಲಿನ ನಾಗರಿಕ ಮಿತ್ರ ಸಂಸ್ಥೆ ಹಾಗೂ ನೆಹರು ಯುವ ಕೇಂದ್ರ ಜಂಟಿಯಾಗಿ ಜರದೊಸಿ(ಜರಿವರ್ಕ್), ಕಸೂತಿ ಮತ್ತು ಗ್ಲಾಸ್ ವರ್ಕ್ ತರಬೇತಿ ಹಮ್ಮಿಕೊಂಡಿವೆ. ಆಸಕ್ತರು ಖಾಜಿ ಕಾಂಪ್ಲೆಕ್ಸ್, ಹುಬ್ಲೀಕರ ಪ್ಲಾಟ್, ಸಾಧನಕೇರಿ, ಮೊ: 98443 81009 ಸಂಪರ್ಕಿಸಬಹುದು ಎಂದು ಎಸ್.ಎಂ. ಮುಲ್ಲಾ ತಿಳಿಸಿದ್ದಾರೆ.
ವಾಲ್ಮೀಕಿ ಜಯಂತಿ ಆಚರಣೆ
ಹುಬ್ಬಳ್ಳಿ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬಹುಜನ ಸಮಾಜ ಪಾರ್ಟಿ ಹುಬ್ಬಳ್ಳಿ ಘಟಕದ ವತಿಯಿಂದ ನಗರದಲ್ಲಿ ಇತ್ತೀಚೆಗೆ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಸಂಯೋಜಕ ಪ್ರೇಮನಾಥ ಚಿಕ್ಕತುಂಬಳ, ಯಾವುದೇ ವ್ಯಕ್ತಿ ತನ್ನ ಜೀವನ ಶೈಲಿ ಬದಲಾಯಿಸಿಕೊಂಡು ಮಹತ್ತರ ಸಾಧನೆ ಮಾಡಬಹುದೆಂಬುದನ್ನು ಮಹರ್ಷಿ ವಾಲ್ಮೀಕಿ ಅವರಿಂದ ಕಲಿಯಬಹುದು ಎಂದರು. ವ್ಯಕ್ತಿಯ ಮಾನ್ಯತೆ ಜಾತಿ-ಧರ್ಮದಿಂದ ಅಳಿಯಲು ಸಾಧ್ಯವಿಲ್ಲ. ಬದಲಾಗಿ ವ್ಯಕ್ತಿಯ ವ್ಯಕ್ತಿತ್ವದಿಂದ ಅಳೆಯಬಹುದು ಎಂದ ಅವರು, ರಾಜ್ಯ ಸರ್ಕಾರ ಡಾ. ಮಹಿಷಿ ವರದಿ ಜಾರಿಗೊಳಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ವಾಲ್ಮೀಕಿ ಸಮಾಜದ ಮುಖಂಡರಾದ ರಾಜು ವಾಲ್ಮೀಕಿ, ಗದಿಗೆಪ್ಪ ಶಿರೂರ ಅತಿಥಿಗಳಾಗಿದ್ದರು. ರೇವಣಸಿದ್ದಪ್ಪ ಬೆಂಗಳೂರ, ಪಕ್ಕಣ್ಣ ದೊಡ್ಡಮನಿ, ಸುರೇಶ ಖಾನಾಪುರ, ಶ್ರೀಧರ ಟಗರಗುಂಟಿ, ಓಬಳೇಶ ರಾಕೇಟಲ್ಲಾ, ಪ್ರಕಾಶ ವೀರಾಪುರ, ಬಸವರಾಜ ಚಿಕ್ಕತುಂಬಳ, ಸೋಮಪ್ಪ ಅಂಜಗಿ, ನಾಗಪ್ಪ ವಾಲ್ಮೀಕಿ, ಶೇಖರಯ್ಯ ಮಠಪತಿ ಮತ್ತಿತರರು ಹಾಜರಿದ್ದರು.
ಇಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ಉದ್ಘಾಟನೆ
ಹುಬ್ಬಳ್ಳಿ: ನಗರದ ಕೊಪ್ಪಿಕರ ರಸ್ತೆಯಲ್ಲಿದ್ದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ನ್ಯೂ ಕಾಟನ್ ಮಾರ್ಕೆಟ್ಗೆ ಸ್ಥಳಾಂತರಗೊಂಡಿದೆ.
ಬ್ಯಾಂಕ್ ಶಾಖೆ ಕಲಬುರ್ಗಿ- ನೂಲ್ವಿ ಮೆಜಿಸ್ಟಿಕ್ನ ನೆಲಮಹಡಿಗೆ ಸ್ಥಳಾಂತರಗೊಂಡಿದ್ದು, ಅ. 21ರ ಬೆಳಗ್ಗೆ 9.30 ಗಂಟೆಗೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಮಹಾನಗರ ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಸಮಾರಂಭ ಉದ್ಘಾಟಿಸಲಿದ್ದು, ಬ್ಯಾಂಕಿನ ಬೆಂಗಳೂರು ವಲಯದ ವಲಯ ಪ್ರಬಂಧಕ ಎ.ವೈ. ಶೇಡಶಾಳೆ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.