ಋಣ ತೀರಿಸಲು ಸಾಮೂಹಿಕ ವಿವಾಹ
ಕುಂದಗೋಳ: ತಾಲೂಕಿನಲ್ಲಿ ಬಡವರಿಗೆ ಮದುವೆ ಮಾಡಿಕೊಳ್ಳಲು ಆರ್ಥಿಕ ಹೊರೆಯಾಗುತ್ತಿರುವುದು ಸಾಮಾನ್ಯ ಸ್ಥಿತಿಯಾಗಿದೆ. ಮೊದಲು ಶಾಸಕರಾಗಿರುವಾಗ ಪ್ರತಿವರ್ಷ 500ಕ್ಕೂ ಹೆಚ್ಚು ಸಾಮೂಹಿಕ ವಿವಾಹ ನೆರವೇರಿಸುತ್ತಿದ್ದೇವೆ. ಈಗ ಮತ್ತೆ ನನಗೆ ರಾಜಕೀಯ ಪುನರ್ಜನ್ಮ ನೀಡಿದ ತಾಲೂಕಿನ ಜನತೆ ಋಣ ತೀರಿಸುವ ಸಲುವಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತೇನೆ ಎಂದು ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.
ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಪದ್ಮಾವತಿ ಸಭಾ ಮಂಟಪದಲ್ಲಿ ಸೋಮವಾರ ಗುಡಗೇರಿ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡುವುದರೊಂದಿಗೆ ನಮ್ಮ ಅನುದಾನವನ್ನು ಕುಂದಗೋಳ ತಾಲೂಕಿಗೆ ನೀಡುವುದಾಗಿ ತಿಳಿಸಿದರು. ಜಿಪಂ ಸದಸ್ಯ ವೇಂಕನಗೌಡ ಹಿರೇಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಗೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ ಕುಂದೂರ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಸದಸ್ಯ ಯಲ್ಲವ್ವ ಮುಗಳಿ, ಗ್ರಾಪಂ ಅಧ್ಯಕ್ಷ ಗೀತಾ ಡಿ. ಸುತಾರ ಇದ್ದರು. ಎಂ.ಜೆ. ಬೆಂತೂರ ಪ್ರಾರ್ಥಿಸಿದರು. ರವಿರಾಜ ಬಸ್ತಿ ಸ್ವಾಗತಿಸಿದರು. ಸಕ್ರು ಲಮಾಣಿ ನಿರೂಪಿಸಿದರು. ರಾಜು ಪಾಟೀಲ ವಂದಿಸಿದರು.