ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಳಸಾ ಜೋಡಣೆಗೆ ಆಗ್ರಹಿಸಿ ಸುವರ್ಣಸೌಧ ಚಲೋ

Lingaraj Badiger
Updated On : 22 Oct 2013, 10:56 am

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆ ಕುರಿತು ಸ್ಪಷ್ಟ ತೀರ್ಮಾನ ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ನ. 25ರಿಂದ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಸುವರ್ಣಸೌಧ ಚಲೋ ಹೋರಾಟ ಹಮ್ಮಿಕೊಳ್ಳಲು ಕಳಸಾ ಹೋರಾಟ ಸಮನ್ವಯ ಸಮಿತಿ ತೀರ್ಮಾನಿಸಿದೆ.
ಸೋಮವಾರ, ಇಲ್ಲಿನ ಛೇಂಬರ್ ಆಫ್ ಕಾಮರ್ಸ್‌ನಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳ, ಸಂಘಟನೆಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಕಳಸಾ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಶಾಶ್ವತ ಪರಿಹಾರ: ಕುಡಿಯುವ ನೀರಿನ ಯೋಜನೆಗೆ ನ್ಯಾಯಾಧೀಕರಣದ ಒಪ್ಪಿಗೆ ಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಆದರೂ 4 ಜಿಲ್ಲೆಗಳ 9 ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಳಸಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಇದುವರೆಗೂ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಹೀಗಾಗಿ ಕೇಂದ್ರ ಮತ್ತು ಗೋವಾ ಸರ್ಕಾರಗಳು ಕೂಡ ತಮ್ಮದೇ ಆದ ಮಾರ್ಗದಲ್ಲಿ ಕಳೆದ 60 ವರ್ಷಗಳಿಂದ ಯೋಜನೆಗೆ ಅಡ್ಡಿಯಾಗುತ್ತಿವೆ. ಮಹಾದಾಯಿ ನ್ಯಾಯಾಧೀಕರಣದ ತೀರ್ಪು ಬರುವವರೆಗೆ ಕನಿಷ್ಠ ಕುಡಿಯುವ ನೀರು ಪೂರೈಕೆಗಾಗಿ 7.35 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳಬಹುದು ಎಂದು ಮದ್ಯಂತರ ತೀರ್ಪು ಪ್ರಕಟಿಸುವಂತೆ ನ್ಯಾಯಾಧೀಕರಣದ ಎದುರು ರಾಜ್ಯ ತನ್ನ ವಾದ ಮಂಡಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ಬಿಜೆಪಿ ಮುಖಂಡ ರಂಗಾಬದ್ದಿ, ಜೆಡಿಯು ರಾಜ್ಯಾಧ್ಯಕ್ಷ ಡಾ. ಎಂ.ಪಿ. ನಾಡಗೌಡ, ಸಿಪಿಎಂನ ಮಹೇಶ ಪತ್ತಾರ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಆಮ್ ಆದ್ಮಿ ಪಾರ್ಟಿ ಸಂಚಾಲಕ ಶೈಲೇಂದ್ರಕುಮಾರ್ ಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆಯ ಹನುಮಂತಪ್ಪ ಮೇಟಿ ಸೇರಿದಂತೆ ಇನ್ನಿತರರು ಕಳಸಾ-ಬಂಡೂರಿ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದರು.

ಸಭೆ ತೀರ್ಮಾನ
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುವ ಮುನ್ನ ಈ ಭಾಗದ ಜನಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ತೆಗೆದುಕೊಂಡು ಹೋಗುವುದಕ್ಕೆ ತೀರ್ಮಾನಿಸಲಾಯಿತು. ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಈ ಯೋಜನೆಗೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಅಗತ್ಯ  ಕ್ರಮ ತೆಗೆದುಕೊಳ್ಳಬೇಕು ಎಂದು ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಿದೆ. ರಾಜ್ಯದ ಸಂಸದರನ್ನು ಒಳಗೊಂಡ ನಿಯೋಗವನ್ನು ಪ್ರಧಾನಿ ಮನಮೋಹನ ಸಿಂಗ್ ಅವರ ಬಳಿ ತೆಗೆದಕೊಂಡು ಹೋಗುವುದಕ್ಕೆ ಸೋಮವಾರ ಜರುಗಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement