ಕಳಸಾ-ಬಂಡೂರಿಗೆ ಮೂರ್ತಸ್ವರೂಪ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ.21
ದಶಕಗಳ ಹಿಂದಿನ ಯೋಜನೆಯೊಂದಕ್ಕೆ ಮೂರ್ತ ಸ್ವರೂಪ ನೀಡುವುದಕ್ಕೆ ಬೆಳಗಾವಿಯಲ್ಲಿ ನ. 25ರಿಂದ ನಡೆಯಲಿರುವ ಚಳಿಗಾಲ ಅಧಿವೇಶನ ಸಾಕ್ಷಿಯಾದಿತೇ..?
ದಶಕಗಳ ಹಿಂದೆ ಮಲಪ್ರಭಾ ನದಿಗೆ ಕರ್ನಾಟಕದಲ್ಲೇ ಹುಟ್ಟಿ ಹರಿಯುವ ಕಳಸಾ ಮತ್ತು ಬಂಡೂರಿ ಹಳ್ಳಗಳನ್ನು ಜೋಡಿಸುವ ಯೋಜನೆ ರೂಪುಗೊಂಡು, ಒಂದು ಹಂತದಲ್ಲಿ ಅನುಮತಿ ದೊರೆತು ಅನುದಾನ ಬಿಡುಗಡೆಯಾಗಿ ಸ್ಥಗಿತಗೊಂಡಿರುವ ಈ ಯೋಜನೆ ಪೂರ್ಣಗೊಳ್ಳಬೇಕು. ಆದರೆ, ಯೋಜನೆ ಪೂರ್ಣಗೊಳ್ಳಬೇಕಾದರೆ ಆಳುವ ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು. ಇಚ್ಛಾಶಕ್ತಿ ತೋರಿಸುವ ಭರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ಸಾಕಷ್ಟು ರಾಜಕಾರಣ ಮಾಡಿವೆ. ರಾಜ್ಯದ ರಾಜಕಾರಣದ ಜೊತೆಗೆ ಕಳೆದ ಒಂದು ದಶಕದ ಅವಧಿಯಲ್ಲಿ ಕೇಂದ್ರದ ರಾಜಕಾರಣವೂ ಸೇರಿಕೊಂಡು ಇಡೀ ಯೋಜನೆ ಹಳ್ಳ ಹಿಡಿಯುವ ಹಂತಕ್ಕೆ ಬಂದು ನಿಂತಿದೆ. ಆದರೂ ಸರ್ಕಾರಗಳು ಈ ನಿಟ್ಟಿನಲ್ಲಿ ವಿಚಾರ ಮಾಡುತ್ತಿಲ್ಲ.
13ಕ್ಕೂ ಹೆಚ್ಚು ವರ್ಷ: ಯೋಜನೆಯ ಜಾರಿಗೆ ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಹೋರಾಟಕ್ಕೆ ಇಳಿದು ಇದೀಗ 13ಕ್ಕೂ ಹೆಚ್ಚು ವರ್ಷಗಳಾಗಿವೆ. ಹೋರಾಟದ ವ್ಯಾಪ್ತಿಯೂ ಬಾಗಲಕೋಟೆ, ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ವಿಸ್ತರಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಹೋರಾಟದ ಕೇಂದ್ರ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದೆ. ಅವಳಿ ನಗರದ ಕುಡಿಯುವ ನೀರಿನ ಮೂಲವಾದ ಮಲಪ್ರಭೆಯ ಒಡಲಲ್ಲಿ ಸದಾ ನೀರು ಇರಬೇಕಾದರೆ ಕಳಸಾ-ಬಂಡೂರಿ ನಾಲಾಗಳಿಂದ ನೀರು ಹರಿದು ಬರಲೇಬೇಕು. ಇದೇ ಕಾರಣಕ್ಕಾಗಿ ಅವಳಿ ನಗರದ ನಾಗರಿಕರನ್ನು ಮತ್ತು ಇಲ್ಲಿನ ಮುಖಂಡರನ್ನು ಹೋರಾಟದ ಮುಂಚೂಣಿಗೆ ತರುವ ಕೆಲಸ ನಡೆಯುತ್ತಿದೆ. ಅ.7ರಂದು ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಅವಳಿ ನಗರ ಬಂದ್ಗೆ ಜನರಿಂದ ಬೆಂಬಲ ಸಿಕ್ಕಿದೆ. ಆದರೆ, ಹೋರಾಟಕ್ಕೆ ರಾಜಕೀಯ ಕ್ಷೇತ್ರದಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ರಾಜಕೀಯದವರು ಇಲ್ಲದಿದ್ದರೆ ನಾವು ಏನು ಮಾಡಿದರೂ ಆಗುವುದಿಲ್ಲ ಎನ್ನುವ ಕೊರಗು ಹೋರಾಟಗಾರರನ್ನು ಕಾಡುತ್ತಿದೆ. ನಮ್ಮ ಹೋರಾಟ ಯೋಜನೆ ಜಾರಿಗೆ ವಿನಃ ಇಲ್ಲಿನ ಜನಪ್ರತಿನಿಧಿಗಳ ಮತ್ತು ಸರ್ಕಾರದ ವಿರುದ್ಧ ಅಲ್ಲವೇ ಅಲ್ಲ. ನಮಗೆ ನೀರು ಸಾಕು ರಾಜಕೀಯ ಬೇಡ ಎಂದು ಹೋರಾಟಗಾರ ವಿಜಯ ಕುಲಕರ್ಣಿ ಘಂಟಾಘೋಷವಾಗಿ ಹೇಳುತ್ತಿದ್ದರೂ ಜನಪ್ರತಿನಿಧಿಗಳ ಜಾಣ ಕಿವಿಗೆ ಇದು ಬೀಳುತ್ತಿಲ್ಲ. ಸದ್ಯದ ಅಂದಾಜಿನ ಪ್ರಕಾರ 30 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲಿರುವ ಯೋಜನೆ ಕುರಿತು ಕೇಂದ್ರಕ್ಕೂ ಮತ್ತು ನ್ಯಾಯಾಧೀಕರಣಕ್ಕೂ ಮನವರಿಕೆ ಮಾಡಿಕೊಡುವ ಕೆಲಸ ರಾಜ್ಯ ಸರ್ಕಾರ ಮಾಡಿಕೊಡಬೇಕಿದೆ. ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೆ ನೆರೆ ರಾಜ್ಯ ಗೋವಾದ ತಕರಾರನ್ನು ಒಂದು ದಿಕ್ಕಿನಲ್ಲಿ ಸಂಧಾನದ ಮುಖಾಂತರ ಮತ್ತು ಇನ್ನೊಂದು ದಿಕ್ಕಿನಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಮೂಲಕ ಕೈಗೆತ್ತಿಕೊಳ್ಳಬೇಕು ಎನ್ನುವುದು ಅನೇಕರ ಅಭಿಪ್ರಾಯ. ಕೋರ್ಟ್ನಲ್ಲಿ ತೀರ್ಪು ಬಂದರೆ ಆದೇಶ ಪಾಲಿಸಲೇಬೇಕಾಗುತ್ತದೆ. ಮೇಲಾಗಿ ಇದು ಕುಡಿವ ನೀರಿಗೆ ಸಂಬಂಧಿಸಿದ ಯೋಜನೆಯಾಗಿರುವುದರಿಂದ ನ್ಯಾಯಾಲಯ ಕೂಡ ಗೋವಾದ ವಾದ ಒಪ್ಪಲಿಕ್ಕಿಲ್ಲ. ರಾಜ್ಯದಲ್ಲಿ ಬೃಹತ್, ಸಣ್ಣ ಮತ್ತು ಅತಿ ಸಣ್ಣ ಎನ್ನಬುದಾದ 60ಕ್ಕೂ ಹೆಚ್ಚು ನದಿಗಳಿವೆ. ನೀರಾವರಿ, ಕುಡಿಯುವ ನೀರು ಸೇರಿದಂತೆ ಒಟ್ಟಾರೆ 146 ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಒಂದೇ ಒಂದು ಯೋಜನೆ ಪೂರ್ಣಗೊಂಡಿದೆ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಸ್ಥಿತಿ ಅಂದಿನ, ಇಂದಿನ ಸರ್ಕಾರಕ್ಕೆ ಇಲ್ಲ.
ಯೋಜನಾ ವೆಚ್ಚ ರು. 44 ಕೋಟಿ: ಮುಂಬೈ ಕರ್ನಾಟಕವನ್ನೇ ತೆಗೆದುಕೊಳ್ಳುವುದಾದರೆ ಮಲಪ್ರಭಾ ಬಲದಂಡೆ ಯೋಜನೆ ಇನ್ನೂ ಮುಗಿದಿಲ್ಲ. ರು. 1200 ಕೋಟಿ ವೆಚ್ಚದ ಯೋಜನೆಯಿಂದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ 60 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಕೃಷ್ಣಾ ಮೇಲ್ದಂಡೆಯದ್ದಂತೂ ಹೇಳಲಿಕ್ಕಾಗದ ಪರಿಸ್ಥಿತಿ ಇದೆ. ಘಟಪ್ರಭಾ ಕೂಡ ಇದಕ್ಕೆ ಹೊರತಾಗಿಲ್ಲ.
1985ರಲ್ಲಿ ಸಿದ್ಧಪಡಿಸಿದ್ದ ಕಳಸಾ-ಬಂಡೂರಿ ನಾಲಾ ಯೋಜನಾ ವೆಚ್ಚ ಬರೀ ರು. 44 ಕೋಟಿ ಇತ್ತು. ಆದರೆ, ಇಂದು ಒಟ್ಟಾರೆ ಯೋಜನಾ ವೆಚ್ಚ 424 ಕೋಟಿ ತಲುಪಿದೆ. ಯೋಜನೆಯ ಪೈಕಿ ಕಳಸಾ ನಾಲಾಕ್ಕೆ ಸಂಬಂಧಿಸಿದಂತೆ ಮಾತ್ರ ಕೆಲಸ ಆಗಿದೆ. ಬಂಡೂರಿ ಯೋಜನೆಯಂತೂ ನ್ಯಾಯಾಧೀಕರಣದ ತೀರ್ಪಿನ ನಂತರವೇ ಏನೋ ಎನ್ನುವಂತಾಗಿದೆ. ಚಳಿಗಾಲ ಅಧಿವೇಶನದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆದು ಯೋಜನೆಗೆ ಹಿಡಿದಿರುವ ಗ್ರಹಣ ಬಿಡುವುದೋ ನೋಡಬೇಕಿದೆ.
- ಸತೀಶ ಪಾಗಾದ