ದಾರಿಗೆ ಬಾರದ ಮುಂಬೈ ಮಾದರಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 21
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಎದುರಾಗಿರುವ ಸಂಚಾರಿ ಸಮಸ್ಯೆಗೆ ಮುಂಬೈ ಮಾದರಿಯಲ್ಲಿ ಲಗಾಮು ಹಾಕುವ ಮಹತ್ವದ ಪ್ರಯತ್ನವೊಂದು ನಡೆದಿತ್ತು. ಆದರೆ, ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂಥದೊಂದು ಮಹತ್ವಾಕಾಂಕ್ಷಿಯ ಯೋಜನೆ ಹಳ್ಳ ಹಿಡಿದಿರುವುದು ವಿಪರ್ಯಾಸವೇ ಸರಿ.
ಹುಬ್ಬಳ್ಳಿ-ಧಾರವಾಡದ ಸಂಚಾರಿ ಸಮಸ್ಯೆ ಇಂದು ನಿನ್ನೆಯದಲ್ಲ. ಇದನ್ನು ಮನಗಂಡು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಅಂದಿನ ಪೊಲೀಸ್ ಕಮೀಷನರ್ ಆಗಿದ್ದ ರಾಘವೇಂದ್ರ ಔರಾದಕರ್ ಮಹತ್ವದ ಯೋಜನೆಯೊಂದನ್ನು ರೂಪಿಸಿದ್ದರು. ಮುಂಬೈ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಲ್ಲಿಯೂ ಟ್ರಾಫಿಕ್ ನಿರ್ವಹಣೆ ಯೋಜನೆ ಜಾರಿಗೊಳಿಸಲು ಮುಂದಾಗಿದ್ದರು.
ಏನಿದು ಮುಂಬೈ ಮಾದರಿ?: ಮಹಾನಗರಿ ಮುಂಬೈನಲ್ಲಿ ನಿತ್ಯ ಕೋಟ್ಯಂತರ ವಾಹನಗಳು ರಸ್ತೆಗಿಳಿಯುತ್ತವೆ. ಅಲ್ಲಿನ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಸುಗಮ ಸಂಚಾರಕ್ಕೆ ಯೋಜನೆಯೊಂದನ್ನು ರೂಪಿಸಿದ್ದರಿಂದ ವಾಹನ ಓಡಾಟ ಸರಾಗವಾಗಿದೆ. ಇದೇ ಮಾದರಿ ಹುಬ್ಬಳ್ಳಿ-ಧಾರವಾಡದಲ್ಲಿ ಜಾರಿಗೆ ತಂದಲ್ಲಿ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಸಂಚಾರಿ ಸಮಸ್ಯೆಗೆ ತಡೆಯೊಡ್ಡಬಹುದು ಎಂದು ಯೋಜಿಸಿದ್ದರು ಔರಾದಕರ.
ಅವಳಿ ನಗರದಲ್ಲಿಯೂ ಮುಂಬೈ ಮಾದರಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಮುಂಬೈನಲ್ಲಿ ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿದ್ದ ತಜ್ಞ ಎಂಜಿನಿಯರ್ ತಂಡದ ಓರ್ವ ಎಂಜಿನಿಯರ್ ಈ ತಂಡದ ನೇತೃತ್ವ ವಹಿಸಿದ್ದರು. ಇವರೊಟ್ಟಿಗೆ ಬೆಂಗಳೂರಿನ ಪ್ರಮುಖ ಎಂಜಿನಿಯರ್‌ಗಳು, ಹು-ಧಾ ಪಾಲಿಕೆಯ ಎಂಜಿನಿಯರ್‌ಗಳು ಹಾಗೂ ಪೊಲೀಸ್ ಅಧಿಕಾರಿಗಳು ತಂಡದಲ್ಲಿದ್ದರು. ಈ ತಂಡ ಹುಬ್ಬಳ್ಳಿ-ಧಾರವಾಡದ ಸಂಚಾರಿ ವ್ಯವಸ್ಥೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿತ್ತು. ಜತೆಗೆ ಸಂಚಾರಿ ಸಮಸ್ಯೆ ಎಲ್ಲೆಲ್ಲಿದೆ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ದಾಖಲಿಸಿಕೊಂಡಿತ್ತು.
ತರಬೇತಿಗೂ ಕಳಿಸಲಾಗಿತ್ತು: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಮುಂಬೈ ಮಾದರಿಯ ಸಂಚಾರಿ ನಿಯಂತ್ರಣದ ಸಂಪೂರ್ಣ ಮಾಹಿತಿ ಪಡೆಯಲು ಐವರು ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಸಿಪಿಐ, ಪಿಎಸ್‌ಐ ಹಂತದ ಈ ಅಧಿಕಾರಿಗಳು ಹೈದ್ರಾಬಾದ್‌ಗೆ ಹೋಗಿ ವಿಶೇಷ ತರಬೇತಿ ತೆಗೆದುಕೊಂಡು ಬಂದಿದ್ದರು.
ವರ್ಗಾವಣೆ ತಂದ ಆಪತ್ತು: ಆದರೆ, ಅವಳಿ ನಗರದ ದೌರ್ಭಾಗ್ಯವೋ ಏನೋ ಇಷ್ಟೊಂದು ತಯಾರಿ ನಡೆಯುತ್ತಿರುವಾಗಲೇ ಔರಾದಕರ ಹುಬ್ಬಳ್ಳಿಯಿಂದ ವರ್ಗವಾದರು. ಅವರು ವರ್ಗವಾದ ಬೆನ್ನಲ್ಲಿಯೇ ಯೋಜನೆಯೂ ಹಳ್ಳ ಹಿಡಿಯಿತು. ಪಾಲಿಕೆಯಾಗಲಿ, ಜನಪ್ರತಿನಿಧಿಗಳಾಗಲಿ ಮುಂದೆ ಈ ಯೋಜನೆಯ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಔರಾದಕರ ಬಳಿಕ ಆಯುಕ್ತರಾಗಿ ಬಂದವರೂ ಈ ಕುರಿತು ಚಿಂತನೆಯನ್ನು ಮಾಡಲೇ ಇಲ್ಲ.
ಸಿಗ್ನಲ್ ಬಳಿ ನಿಲುಗಡೆ
ಸುಗಮ ಸಂಚಾರಕ್ಕೆ ಅಡ್ಡಿ ಮಾಡಿ ಟ್ರಾಫಿಕ್ ಜಾಮ್ ಆಗುವಲ್ಲಿ ಸಾರಿಗೆ ಸಂಸ್ಥೆ, ಖಾಸಗಿ ಬಸ್‌ಗಳದ್ದೇ ಪಾತ್ರ ಹೆಚ್ಚಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಸ್ ನಿಲುಗಡೆ ವ್ಯವಸ್ಥೆಯೇ ಅವ್ಯವಸ್ಥೆಗೆ ಪ್ರಮುಖ ಕಾರಣ. ಅಗತ್ಯವಿಕ್ಕಿಂತ ಹೆಚ್ಚಾಗಿ ಅನಗತ್ಯ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡಲಾಗುತ್ತಿದೆ. ಸಿಗ್ನಲ್‌ಗಳಿಗೆ ಹೊಂದಿಕೊಂಡಂತೆಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡಲಾಗುತ್ತಿದೆ. ಹುಬ್ಬಳ್ಳಿಯ ಉಣಕಲ್ ಕ್ರಾಸ್ ಸಿಗ್ನಲ್ ಬಳಿ, ವಿದ್ಯಾನಗರ, ಕೆಎಂಸಿ, ಹೊಸೂರು, ಬಸವ ವನ, ಕೋರ್ಟ್ ವೃತ್ತ, ಪಾಲಿಕೆ, ಸ್ಟೇಶನ್ ರಸ್ತೆ, ಸರ್ವೋದಯ ಸರ್ಕಲ್, ದೇಸಾಯಿ ಸರ್ಕಲ್, ಕ್ಲಬ್ ರೋಡ್, ಧಾರವಾಡದ ಟೋಲ್‌ನಾಕಾ, ಎನ್‌ಟಿಟಿಎಫ್, ಕೋರ್ಟ್ ವೃತ್ತ, ಜುಬ್ಲಿ ಸರ್ಕಲ್, ಶಿವಾಜಿ ಸರ್ಕಲ್, ದಾಂಡೇಲಿ ರಸ್ತೆಯಲ್ಲಿರುವ ಸಿಗ್ನಲ್‌ಗೆ ಹೊಂದಿಕೊಂಡಂತೇ ಬಸ್ ಸ್ಟಾಪ್‌ಗಳಿವೆ. ಸಿಗ್ನಲ್ ಹಸಿರು ದೀಪ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲ ವಾಹನಗಳು ಮುನ್ನಗ್ಗುತ್ತ ಸಾಗಿದರೆ ಬಸ್‌ಗಳು ಸ್ವಲ್ಪ ಮುಂದೆ ಹೋಗಿ ರಸ್ತೆಗೆ ಹೊಂದಿಕೊಂಡು ನಿಂತು ಬಿಡುತ್ತವೆ. ಇದರಿಂದಾಗಿ ಹಿಂಬದಿ ವಾಹನಗಳಿಗೆ ಹೋಗಲು ದಾರಿಯೇ ಇರುವುದಿಲ್ಲ. ಕೊನೆ ಪಕ್ಷ ಬಸ್‌ನ್ನು ರಸ್ತೆ ಪಕ್ಕಕ್ಕೆ ಹೋಗಿ ನಿಲ್ಲಿಸುವ ವ್ಯವಧಾನವೂ ಬಸ್ ಚಾಲಕರಲ್ಲಿರುವುದಿಲ್ಲ. ಇದು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣವಾಗಿದೆ.
ರಸ್ತೆಯೇ ಸಮಸ್ಯೆಗೆ ಕಾರಣ
ಟ್ರಾಫಿಕ್ ಅವ್ಯವಸ್ಥೆಗೆ ಪ್ರಮುಖ ಕಾರಣವಾಗಿರುವುದು ಹುಬ್ಬಳ್ಳಿ-ಧಾರವಾಡದಲ್ಲಿ ಹಳ್ಳ ಹಿಡಿದಿರುವ ರಸ್ತೆಗಳು. ದೂರದೃಷ್ಟಿತ್ವ ಇಲ್ಲದ ರಸ್ತೆಗಳು, ಹೊಂಡ ಬಿದ್ದಿರುವ ರಸ್ತೆಗಳು ಸಂಚಾರಿ ವ್ಯವಸ್ಥೆಗೆ ಸಂಚಕಾರ ತಂದಿವೆ. ಹೊಂಡದಲ್ಲಿ ಏಳುತ್ತ-ಬೀಳುತ್ತ ಸಾಗುವ ವಾಹನಗಳಿಂದ ಹಾಗೂ ಹೊಂಡದಲ್ಲಿ ಸಿಕ್ಕಿಹಾಕಿಕೊಳ್ಳುವ ವಾಹನಗಳು ಟ್ರಾಫಿಕ್ ಜಾಮ್ ಮಾಡುತ್ತಿವೆ. ರು. 30 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಿದಾಗ ಸರಾಗವಾಗಿ ವಾಹನ ಓಡಾಡುವಂತಾಗಿ ಒಂದು ಹಂತದಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರವಾಗಿತ್ತು. ಆದರೆ, ಒಳ ಚರಂಡಿ ಕಾಮಗಾರಿಯಿಂದಾಗಿ ಮತ್ತೆ ರಸ್ತೆ ಹಾಳುಗೆಡವಲಾಯಿತು. ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕೆಲವೆಡೆ ಚರಂಡಿ ಕಾಮಗಾರಿ ಮುಗಿದರೂ ರಸ್ತೆ ನಿರ್ಮಾಣ ಮಾತ್ರ ಆಗಿಲ್ಲ. ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಆಸಕ್ತಿಯೇ ಇಲ್ಲ. ಇನ್ನೂ ಹುಬ್ಬಳ್ಳಿ-ಧಾರವಾಡದಲ್ಲಿ ಓಬಿರಾಯನ ಕಾಲದ ರಸ್ತೆಗಳನ್ನು ಕಾಣಬಹುದಾಗಿದೆ. ಒಂದೇ ಒಂದು ಫ್ಲೈಓವರ್, ರಿಂಗ್ ರೋಡ್ ಹುಬ್ಬಳ್ಳಿ-ಧಾರವಾಡ ಇತಿಹಾಸದಲ್ಲಿ ನಿರ್ಮಾಣವಾಗಿಲ್ಲ. ಇದೀಗ ಆರಂಭವಾಗಿರುವ ಅವಳಿ ನಗರದ ನಡುವಿನ ಚತುಷ್ಪಥ ಕಾಮಗಾರಿಯೂ ನಿಂತ ನೀರಾಗಿದೆ. ಹೀಗಿದ್ದಾಗ ಸಂಚಾರಿ ವ್ಯವಸ್ಥೆ ಪೊಲೀಸರು ಮಾತ್ರ ಅದೇಗೆ ಸರಿಪಡಿಸಲು ಸಾಧ್ಯ?
-ಪ್ರಕಾಶ ಎಸ್. ಶೇಟ್