ಪರೀಕ್ಷೆಗಳಲ್ಲಿ ಅವ್ಯವಹಾರ
ಧಾರವಾಡ: ರಾಜ್ಯ ಪ್ರೌಢಶಿಕ್ಷಣ ಮಂಡಳಿ ಪ್ರತಿವರ್ಷ ನಡೆಸುತ್ತಿರುವ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು, ಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ರಾಜ್ಯಾಧ್ಯಕ್ಷ ಸಿ.ಕೆ.ಎಚ್. ಶಾಸ್ತ್ರೀ (ಕಡಣಿ) ಆಗ್ರಹಿಸಿದ್ದಾರೆ. ಈ ಕುರಿತು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಅನರ್ಹ ನೃತ್ಯ, ಸಂಗೀತ ಕಲಾವಿದರು ಈ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಬರುತ್ತಿರುವುದರಿಂದ ಪರೀಕ್ಷೆಗಳಲ್ಲಿ ನಕಲು ನಡೆಯುತ್ತಿದೆ. ಹಣ ಪಡೆದು ನಕಲು ಮಾಡಲು ಅವಕಾಶ ಒದಗಿಸಲಾಗುತ್ತಿದೆ. ಇದರಿಂದ ನಿಜವಾದ ಕಲಾವಿದರಿಗೆ ತುಂಬ ಹಾನಿಯಾಗುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಪರೀಕ್ಷೆಗಳ ಮೂಲಕ ಹಣ ಮಾಡುವುದನ್ನೇ ರೂಢಿಸಿಕೊಂಡಿದ್ದಾರೆ. ಈ ಪರೀಕ್ಷೆಗಳಿಂದ ನಮ್ಮ ಸಂಸ್ಕೃತಿ, ಕಲೆಗೂ ಅವಮಾನ. ಸರ್ಕಾರದ ಬೊಕ್ಕಸಕ್ಕೂ ಹಾನಿ. ಈ ನಿಟ್ಟಿನಲ್ಲಿ ಸಚಿವರು ಗಮನ ಹರಿಸಬೇಕೆಂದು ಶಾಸ್ತ್ರೀ ಮನವಿ ಮಾಡಿದ್ದಾರೆ.