ಫುಟ್ಪಾತ್ ಧ್ವಂಸ: ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ನೋಟಿಸ್
ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಎದುರಿನ ಫುಟ್ಪಾತ್ ಧ್ವಂಸಗೊಳಿಸಿ ಸಸಿ ನೆಟ್ಟ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಪರಿಸರ ಬೆಳೆಸುವ ನಿಟ್ಟಿನಲ್ಲಿ ಪಾಲಿಕೆ ಅನುಮತಿ ಪಡೆಯದೇ ಸಂಘದ ಮುಂದಿನ ಫುಟಪಾತ್ ಅಗೆದು ಭಾನುವಾರವಷ್ಟೇ ಸಸಿ ನೆಟ್ಟಿದ್ದರು. ಈ ಕುರಿತು ಪಾಲಿಕೆ ವಲಯಾಧಿಕಾರಿ ಶ್ರೀಧರ ಅವರು ವಿವರಣೆ ಕೇಳಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಿಗೆ ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಗಿಡ ನೆಡಲು ಫುಟಪಾತ್ ಅಗೆಯುವುದು ಸರಿಯಲ್ಲ. ಆದ್ದರಿಂದ ಈ ವಿಷಯದ ನಿಮಿತ್ತ ನೋಟಿಸ್ ಜಾರಿ ಮಾಡಲಾಗಿದೆ. ಮೂರು ದಿನಗಳ ಒಳಗಾಗಿ ಅವರಿಂದ ಯಾವ ಉತ್ತರ ಬರುತ್ತದೆ ಎಂದು ನೋಡಿ ನಂತರ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.