ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೌಲ್ಯಾಂಕನ: ಖಾಸಗಿ ಶಾಲೆಗಳಿಗೆ ಅವಕಾಶ

Lingaraj Badiger
Updated On : 22 Oct 2013, 11:08 am

ಧಾರವಾಡ: ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ನಡೆಸುವ ಶಾಲಾ ಗುಣಮಟ್ಟ ಮೌಲ್ಯಾಂಕನ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಖಾಸಗಿ ಸ್ವಾಮ್ಯದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಈಗ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಆಯ್ದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಾಲಾ ಗುಣಮಟ್ಟ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿರುವ, ರಾಜ್ಯ ಪಠ್ಯಕ್ರಮದಂತೆ ನಡೆಯುತ್ತಿರುವ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಅಧಿಕೃತ ಶಾಲೆಗಳನ್ನೂ ಶಾಲಾ ಗುಣಮಟ್ಟ ಮೌಲ್ಯಾಂಕನ ಪರೀಕ್ಷೆಗೆ ಒಳಪಡಿಸಿದ್ದು, ಸದರಿ ಶಾಲೆಗಳ ಆಡಳಿತ ಮಂಡಳಿಯವರು ಸ್ವಯಂ ಪ್ರೇರಣೆಯಿಂದ ರು. 12 ಸಾವಿರವನ್ನು ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆಎಸ್‌ಕ್ಯೂಎಎಸಿ ಬೆಂಗಳೂರು ಹೆಸರಿಗೆ ರಾಷ್ಟ್ರೀಕೃತ ಬ್ಯಾಂಕ್ ಹುಂಡಿ ಪಡೆದು ಶಾಲಾ ವಿವರಗಳೊಂದಿಗೆ ಅ. 30ರೊಳಗಾಗಿ ಪೂರಕ ಪ್ರಸ್ತಾವನೆಯನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬೇಕು. ಅ. 30ರ ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವದಿಲ್ಲ. ಶಾಲಾ ಗುಣಮಟ್ಟ ಮೌಲ್ಯಾಂಕನ ಪರೀಕ್ಷೆಯು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ 3,5,7, 9ನೇ ವರ್ಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಇಲ್ಲವೇ ಕಾರ್ಯದರ್ಶಿಗಳು ಹೆಚ್ಚಿನ ಮಾಹಿತಿಗಾಗಿ ಡಯಟ್ ನೋಡಲ್ ಅಧಿಕಾರಿ ಎಚ್.ಎಚ್. ಮೇಟಿ(ಮೊ:94833 34189) ಸಂಪರ್ಕಿಸಬೇಕೆಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಚ್.ಎನ್. ಗೋಪಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆ ಕೊಲೆ:
ಆರೋಪಿಗಳ ಬಂಧನ
ಕಾರವಾರ: 2012ರ ಆ. 20ರಂದು ಶಿರಸಿ- ಯಲ್ಲಾಪುರ ರಸ್ತೆಯ ಬಳಿ ನಡೆದಿದ್ದ ಮಹಿಳೆ ಕೊಲೆಯ ಹಿಂದಿನ ಸತ್ಯವನ್ನು ಪೊಲೀಸರು ತನಿಖೆ ನಡೆಸಿ, ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸೋಮವಾರ ನಗರದ ಎಸ್ಪಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ವರ್ಷದಿಂದ ಮೃತ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ತನಿಖೆಯನ್ನು ಚುರುಕುಗೊಳಿಸಿದ ಬಳಿಕ ಮಹಿಳೆ ಧಾರವಾಡದ ಕೊಪ್ಪದಕೇರಿಯ ಎಂ.ಬಿ. ನಗರದ ಭಾರತಿ ರಾಜಾರಾಮ ಮಾನೆ (37) ಎಂದು ತಿಳಿಯಲಾಯಿತು. ಮಹಿಳೆ ಬಳಿಯಿದ್ದ ಹಣ ದೋಚುವ ಸಲುವಾಗಿ ಆಕೆಯ ಗಂಡ ರಾಜಾರಾಮ, ಮಾವ ಗಣಪತರಾವ್, ಅತ್ತೆ ಗೀತಾಬಾಯಿ, ನಾದಿನಿಯ ಮಗ ಸಂದೀಪ ಆಯುಧದಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದಾರೆ. ಅನಂತರ ಸಾಕ್ಷ್ಯ ನಾಶಪಡಿಸುವ ಸಲುವಾಗಿ ಶವವನ್ನು ಚೀಲದಲ್ಲಿ ತುಂಬಿ ಶಿರಸಿ-ಯಲ್ಲಾಪುರ ರಸ್ತೆಯ ಕಾನಗೋಡ ರಸ್ತೆಯ ಬದಿ ಕಾಡಿನಲ್ಲಿ ಬಿಸಾಕಿ ಹೋಗಿದ್ದರು. ತನಿಖೆಯಿಂದ ಕೊಲೆಯ ರಹಸ್ಯ ಬಯಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ಸ್ವಾವಲಂಬನೆಯತ್ತ ಮಹಿಳೆ ಚಿತ್ತ: ಶಂಕ್ರಣ್ಣ ಅಗಡಿ
ಧಾರವಾಡ: ಪ್ರಸ್ತುತ ಮಹಿಳೆಯರು ಪುರುಷರನ್ನು ಅವಲಂಬಿಸದೆ, ಕುಟುಂಬದ ಆರ್ಥಿಕ ಸ್ವಾವಲಂಬನೆಗೆ ಉದ್ಯೋಗದತ್ತ ವಾಲುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷ ಶಂಕ್ರಣ್ಣ ಅಗಡಿ ಹೇಳಿದರು. ತಾಲೂಕಿನ ಬೀರವಳ್ಳಿ ಗ್ರಾಮದ ದುರ್ಗಮ್ಮ ದೇವಸ್ಥಾನದಲ್ಲಿ ನಡೆದ ಮಹಿಳಾ ನವಸಾಕ್ಷರರಿಗೆ ಹಮ್ಮಿಕೊಂಡಿರುವ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಹಿಳಾ ನವಸಾಕ್ಷರರು ಮೂರು ತಿಂಗಳ ತರಬೇತಿ ಪಡೆದು ಬಿಡುವಿನ ವೇಳೆ ವಿಭಿನ್ನ ರೀತಿಯ ಬಟ್ಟೆ  ಹೊಲಿಯುವ ಮೂಲಕ ಆರ್ಥಿಕ ಸಬಲೀಕರಣ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಶಿಬಿರದಲ್ಲಿ ಪಡೆದ ತರಬೇತಿ ಪಡೆದ ಮಹಿಳೆಯರು ಕುಟುಂಬಸ್ಥರಿಗೆ ತರಬೇತಿ ನೀಡುವ ಮೂಲಕ ನಿರಂತರ ಕಲಿಕೆಗೆ ಅನುವು ಮಾಡಿಕೊಡಬೇಕು ಎಂದರು. ಜಿಪಂ ಸದಸ್ಯ ಬಸವರಾಜ ಕರಡಿಕೊಪ್ಪ ಮಾತನಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್.ವೈ. ಸುಣಗಾರ, ಸಿದ್ದಪ್ಪ ಪಿರಪ್ಪಣ್ಣವರ, ಮಲ್ಲವ್ವ ವಡ್ಡರ, ಶಾಂತವ್ವ ಜಿನ್ನೂರು, ಮರಿಯಪ್ಪ ಹರಿಜನ, ನೀಲಮ್ಮ ಹುಲ್ಲಂಬಿ, ಶೋಭಾ ಕಟ್ಟಿ, ಬಸಮ್ಮಾ ಕಡ್ಲಿ, ಎಸ್.ಆರ್. ರಾಚಣ್ಣವರ, ಪಿ.ಐ. ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement