ಆಕಸ್ಮಿಕ ಬೆಂಕಿ: ರು. 3 ಲಕ್ಷ ಹಾನಿ
ಧಾರವಾಡ: ಇಲ್ಲಿನ ಭೂಸಪ್ಪ ಚೌಕ್ ಬಳಿಯ ಕಸಬಾಗೌಡರ ಓಣಿಯ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡ ಪರಿಣಾಮ ರು. 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಭಸ್ಮವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಲೊಕೇಶ ತುಂಗಳ ಎಂಬುವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇವರು ಬಟ್ಟೆ ವ್ಯಾಪಾರಸ್ಥರಾಗಿದ್ದರಿಂದ ದೀಪಾವಳಿಗೋಸ್ಕರ ಅಂಗಡಿಗೆ ತಂದಿದ್ದ ಬಟ್ಟೆಗಳನ್ನು ಮನೆಯಲ್ಲಿ ಇಟ್ಟಿದ್ದರು. ಅಲ್ಲದೆ, ಟಿವಿ, ಕಂಪ್ಯೂಟರ್ ಹಾಗೂ ಇನ್ನಿತರ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟಿವೆ. ಘಟನೆ ತಿಳಿದು ತಕ್ಷಣವೇ ಅಲ್ಲಿನ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೂ ಫಲಕಾರಿಯಾಗಿಲ್ಲ. ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮದಳ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಹೊರ ತಂದು ಬಾರಿ ಅನಾಹುತ ತಪ್ಪಿಸಿದೆ.
ಮನೆಗೆ ಹೊಂದಿಕೊಂಡು ಏಳು ಮನೆಗಳಿವೆ. ಅಲ್ಲದೆ, ಈ ಮನೆಯ ಪಕ್ಕದಲ್ಲಿನ ಮಲ್ಲೇಶ ಧಾರವಾಡ ಅವರ ಮನೆಗೂ ಕ್ರಮೇಣ ಬೆಂಕಿ ಆವರಿಸತೊಡಗಿತ್ತು. ಅಷ್ಟರಲ್ಲಿ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಮನೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು.
ಎರಡು ಗಂಟೆ ನಡೆದ ಈ ಕಾರ್ಯಾಚರಣೆಯಲ್ಲಿ ಅಲ್ಲಿನ ನಿವಾಸಿ ಬಸವರಾಜ ಕಟಗಿ ಮತ್ತು ಬಾಬು ಕಟಗಿ ಎಂಬುವರು ಬೆಂಕಿ ನಂದಿಸಲು ಶ್ರಮಿಸಿದರು. ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಕಿ ಅನಾಹುತ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.