ಟ್ರಾಫಿಕ್ ಸಮಸ್ಯೆಗೆ ಪೊಲೀಸರಷ್ಟೇ ಕಾರಣವೇ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 22
ನಗರದಲ್ಲಿ ಸುಗಮ ಸಂಚಾರಿ ವ್ಯವಸ್ಥೆ ಕಲ್ಪಿಸಿಕೊಡುವುದು ಕೇವಲ ಪೊಲೀಸ್ ಇಲಾಖೆ ಜವಾಬ್ದಾರಿಯೇ? ಸಂಚಾರಿ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳ ಸಹಿತ ಜನರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಉದ್ಭವಿಸಿರುವ ಪ್ರಶ್ನೆ ಇದು.
ನಿಜ. ಸಂಚಾರಿ ವ್ಯವಸ್ಥೆಯೂ ಎತ್ತಿನ ಬಂಡಿ ಇದ್ದಂತೆ. ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖವಾಗಿ ಮಹಾನಗರ ಪಾಲಿಕೆ, ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆಯೂ ಮುತುವರ್ಜಿ ವಹಿಸಿದಾಗ ಮಾತ್ರ ಸಂಚಾರಿ ಬಂಡಿ ಸರಿದಾರಿಯಲ್ಲಿ ಸಾಗಲು ಸಾಧ್ಯ. ಹೀಗಿರುವಾಗ ಈಗ ಸಂಚಾರಿ ಸಮಸ್ಯೆ ಪರಿಹಾರ ಬಗ್ಗೆ ಪೊಲೀಸ್ ಇಲಾಖೆ ಹೊರತಾಗಿ ಇನ್ನಾವುದೇ ಇಲಾಖೆಗಳು ತಲೆಕೆಡಿಸಿಕೊಂಡಿಲ್ಲ.
ಮಾಜಿ ಸಚಿವ ಬಸವರಾಜ ಹೊರಟ್ಟಿ ಬಹಿರಂಗ ಪತ್ರ ಬರೆದು ಸಂಚಾರಿ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಪೊಲೀಸ್ ಇಲಾಖೆ ಸಂಚಾರಿ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮದ ಬಗ್ಗೆ ಪೂರ್ವಾಪರ ಯೋಚಿಸಿದೆ.
ಪೊಲೀಸ್ ಸಭೆ: ಸಂಚಾರಿ ಸಮಸ್ಯೆ ಪರಿಹಾರಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು? ಸಂಚಾರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಎಡವುತ್ತಿರುವುದು ಎಲ್ಲಿ? ಟ್ರಾಫಿಕ್ ಜಾಮ್ ಆದಾಗ ಏನೆಲ್ಲ ತುರ್ತು ಕ್ರಮಕೈಗೊಂಡು ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬಿತ್ಯಾದಿ ಸಂಗತಿಗಳ ಕುರಿತು ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ, ಸಂಚಾರಿ ಡಿಸಿಪಿ ಶ್ರೀನಾಥ ಜೋಶಿ ನೇತೃತ್ವದಲ್ಲಿ ಕೆಳ ಹಂತದ ಅಧಿಕಾರಿಗಳ ಸಭೆ ಮಂಗಳವಾರ ನಡೆದಿದೆ.
ಇಲಾಖೆ ಪ್ರಗತಿ ಪರಿಶೀಲನೆ ಜೊತೆಗೆ ಸಂಚಾರಿ ಅವ್ಯವಸ್ಥೆ ಸರಿಪಡಿಸುವುದು ಹೇಗೆಂದು ಪ್ರಮುಖವಾಗಿ ಚರ್ಚೆ ನಡೆದಿದೆ. ಆಯುಕ್ತ ಪದ್ಮನಯನ, ಅಧಿಕಾರಿಗಳು ಸಂಚಾರಿ ಸಮಸ್ಯೆ ಪರಿಹಾರಕ್ಕೆ ಸುಲಭೋಪಾಯಗಳನ್ನು ಪಾಠ ಮಾಡಿದ್ದಾರೆ. ಅಧಿಕಾರಿಗಳಿಂದ ಸೂಕ್ತ ಮಾಹಿತಿಯನ್ನೂ ಪದ್ಮನಯನ ಪಡೆದಿದ್ದಾರೆ.
ಸಂಚಾರಿ ಪೊಲೀಸ್ ಪೇದೆ ಸಿಗ್ನಲ್, ಆಯಕಟ್ಟಿನ ಸ್ಥಳದಲ್ಲಿ ನಿಂತು ಕರ್ತವ್ಯ ನಿರ್ವಹಿಸಿದರೆ ಸಾಲದು. ಅವರ ಆಸುಪಾಸಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾದರೆ ತಕ್ಷಣ ಬಗೆಹರಿಸಲು ಮುಂದಾಗಬೇಕು. ಸೇವಾ ಸಮಯದಲ್ಲಿ ಪೇದೆಗಳು ಗಂಟೆಗಟ್ಟಲೆ ಪಾನ-ಬೀಡಾ ಅಂಗಡಿಯಲ್ಲಿ ಕುಳಿತು ಹರಟೆ ಹೊಡೆಯುವುದು, ನಿದ್ರಿಸುವುದು, ಮೊಬೈಲ್ನಲ್ಲಿ ಹರಟೆ ಹೊಡೆಯುವುದು ಕಂಡರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಉಲ್ಲಂಘನೆಗೆ ತಕ್ಕ ಶಾಸ್ತಿ: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ನಗರದ ವಿವಿಧೆಡೆ ಅಳವಡಿಸಿದ ಕ್ಯಾಮೆರಾ, ಡಿಜಿಟಲ್ ಕ್ಯಾಮೆರಾಗಳ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದವರ ಫೋಟೋ ಸಂಗ್ರಹಿಸಿ ದಂಡ ಹಾಕಲಾಗುತ್ತಿದೆ. ಕ್ಯಾಮೆರಾ ಇಲ್ಲದ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದರೆ ಅಂಥವರನ್ನು ತಡೆದು ಕ್ರಮಕೈಗೊಳ್ಳಬೇಕು. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕ್ ಮಾಡುವುದರಿಂದ, ನೋ ಎಂಟ್ರಿಗಳಲ್ಲಿ ನುಗ್ಗುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿದೆ. ಇಂಥವರ ವಿರುದ್ಧ ಕ್ರಮಕ್ಕೆ ಹಿಂಜರಿಯಬಾರದು ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ಕೊಡಲಾಗಿದೆ.
ಮುಂಬೈ ಮಾದರಿ ಅಥವಾ ಇತರ ನಗರದಲ್ಲಿರುವ ಸುಸಜ್ಜಿತ ಸಂಚಾರಿ ವ್ಯವಸ್ಥೆಯನ್ನು ಅವಳಿನಗರದಲ್ಲಿ ಜಾರಿಗೆ ತರುವ ಪೂರ್ವಾಪರ ಕುರಿತೂ ಚರ್ಚೆ ನಡೆದಿದೆ.
ಸಂಚಾರಿ ವ್ಯವಸ್ಥೆಗೆ ತೊಂದರೆ ಮಾಡಿರುವುದು ಅವಳಿ ನಗರದ ರಸ್ತೆಗಳು. ಈ ರಸ್ತೆಗಳು ಅಭಿವೃದ್ಧಿಯಾಗದ ಹೊರತು ಸುಗಮ ಸಂಚಾರ ಕಷ್ಟ ಎಂಬ ಅಭಿಪ್ರಾಯವನ್ನು ಸಂಚಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಕೈಜೋಡಿಸಲಿ: ಸಂಚಾರಿ ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು ಸಂಬಂಧಿಸಿದ ಎಲ್ಲ ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು. ಸಂಚಾರಿ ವ್ಯವಸ್ಥೆ ಬಲಪಡಿಸಲು ಅಗತ್ಯ ಸಲಹೆ ಸೂಚನೆ ನೀಡುವ ಜತೆ ಯೋಜನೆ ರೂಪಿಸಬೇಕಿದೆ. ಯೋಜನೆ ಕಾರ್ಯರೂಪಕ್ಕೆ ತರಲು ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಬೇಕು. ಇಲ್ಲದಿದ್ದರೆ ಸಂಚಾರಿ ಸಮಸ್ಯೆ ಪರಿಹಾರ ಸುಲಭದ ಮಾತಲ್ಲ.
-ಪ್ರಕಾಶ ಎಸ್. ಶೇಟ್