ಸ್ಥಳೀಯ ಸಂಸ್ಥೆ ಬಿಕ್ಕಟ್ಟಿಗೆ ಮುಕ್ತಿ ಸಿಗುವುದೇ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 22
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಕಣ್ಣು ಹೈಕೋರ್ಟ್ ಏಕ ಸದಸ್ಯ ಪೀಠ ನೀಡುವ ತೀರ್ಮಾನದತ್ತ ನೆಟ್ಟಿದೆ.
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಮೇಯರ್-ಉಪ ಮೇಯರ್ ಮೀಸಲಾತಿಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಅ. 24ರಂದು ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಈ ಮೊದಲು ದ್ವಿಸದಸ್ಯತ್ವ ಪೀಠದಲ್ಲಿದ್ದ ಈ ವಿವಾದ ಇದೀಗ ಏಕ ಸದಸ್ಯತ್ವ ಪೀಠದಲ್ಲಿದೆ. ಅ. 24ರೊಳಗೆ ವಿವಾದದ ತೀರ್ಪು ಪ್ರಕಟಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರು ಈ ಪೀಠಕ್ಕೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
24ರಂದು ತೀರ್ಪು: ಈ ಹಿನ್ನಲೆಯಲ್ಲಿ ಅ. 24ರಂದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಮೇಯರ್-ಉಪ ಮೇಯರ್ ಮೀಸಲಾತಿಗೆ ಸಂಬಂಧಿಸಿದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದು ಏಳು ತಿಂಗಳು ಗತಿಸುತ್ತ ಬಂದಿದ್ದರೂ ಬಹುತೇಕ ಕಡೆ ಚುನಾಯಿತ ಪ್ರತಿನಿಧಿಗಳ ಆಡಳಿತ ಜಾರಿಗೆ ಬಂದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಚುನಾವಣೆ ನಡೆದ ಇನ್ನ್ನುಳಿದ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಕಳೆದ ಆಗಸ್ಟ್ 22ರಂದೇ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು. ಆದರೆ, ಈ ಮೀಸಲಾತಿ ವಿರುದ್ಧವೆದ್ದ ಅಸಮಾಧಾನ ಮತ್ತೆ ಕೋರ್ಟ್ ಮೆಟ್ಟಿಲೇರಿತ್ತು.
ಸರ್ಕಾರ ಮೀಸಲಾತಿ ಹೊರಡಿಸಿದ ಹಾಗೂ ಮೀಸಲಾತಿ ವಿವಾದ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರುವ ಮಧ್ಯೆ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ದಿನಾಂಕ ಪ್ರಕಟಗೊಂಡ ಬೆರಳೆಣಿಕೆಯ ಸ್ಥಳೀಯ ಸಂಸ್ಥೆಗಳಲ್ಲಷ್ಟೇ ಚುನಾಯಿತ ಪ್ರತಿನಿಧಿಗಳ ಆಡಳಿತ ಜಾರಿಗೆ ಬಂದಿದೆ. ಇನ್ನುಳಿದಂತೆ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಇದುವರೆಗೂ ಚುನಾಯಿತ ಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ. ಈಗಾಗಲೇ ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಬರುವಲ್ಲಿ ವಿಳಂಬವಾಗಿದೆ. ಅ. 24ರಂದು ಪ್ರಕಟಗೊಳ್ಳಬಹುದಾದ ತೀರ್ಪಿನ ಮೇಲೆ ಸ್ಥಳೀಯ ಸಂಸ್ಥೆಗಳ ಆಡಳಿತದ ಭವಿಷ್ಯ ನಿರ್ಧಾರಗೊಳ್ಳಲಿದೆ. ಈ ಹಿಂದಿನ ಮೀಸಲಾತಿ ಬದಲಾಯಿಸಿ ತೀರ್ಪು ಹೊರಬಿದ್ದಲ್ಲಿ ಈ ಮೊದಲು ಅಧಿಕಾರದ ಚುಕ್ಕಾಣಿ ಹಿಡಿಯಲು ಹಾಕಿದ್ದ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗಲಿವೆ.
ಹು-ಧಾ ಪಾಲಿಕೆ ಲೆಕ್ಕಾಚಾರ: ಈ ಮೊದಲು ಹು-ಧಾ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗ ಹಾಗೂ ಉಪ ಮೇಯರ್ ಸ್ಥಾನಕ್ಕೆ ಪ.ಪಂಗಡ ಮಹಿಳೆ ಮೀಸಲಾತಿ ಪ್ರಕಟಗೊಂಡಿತ್ತು. ಪಾಲಿಕೆಯ ಎಲ್ಲ ಪಕ್ಷಗಳಲ್ಲಿ ಪ.ಪಂಗಡಕ್ಕೆ ಸೇರಿದ ಮಹಿಳೆ ಇರುವುದು ವಾರ್ಡ್ ಸಂಖ್ಯೆ 22ರ ಬಿಜೆಪಿ ಸದಸ್ಯೆ ಮಂಜುಳಾ ಅಕ್ಕೂರ ಅವರೊಬ್ಬರೇ. ಆದಕಾರಣ ಪಾಲಿಕೆಯಲ್ಲಿ ಯಾವುದೇ ಪಕ್ಷ ಅಸ್ತಿತ್ವಕ್ಕೆ ಬಂದರೂ ಬಿಜೆಪಿಗೆ ಉಪ ಮೇಯರ್ ಸ್ಥಾನ ಖಚಿತವಾಗಿತ್ತು. ಆದರೆ, ಹೈಕೋರ್ಟ್ ಏಕ ಸದಸ್ಯತ್ವ ನೀಡುವ ತೀರ್ಪು ಬದಲಾವಣೆಗೊಂಡಲ್ಲಿ ಹು-ಧಾ ಮಹಾನಗರ ಪಾಲಿಕೆಯಲ್ಲಿನ ಲೆಕ್ಕಾಚಾರಗಳೂ ತಿರುವು ಮುರುವಾಗಲಿವೆ.
ಜೆಡಿಎಸ್ ಬೆಂಬಲ ಅನಿವಾರ್ಯ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದಲ್ಲಿ ಜೆಡಿಎಸ್ ಸದಸ್ಯರ ಸಹಕಾರ ಅಗತ್ಯ. ಜೆಡಿಎಸ್ ಸಹಕಾರ ಪಡೆದುಕೊಳ್ಳುವ ಪಕ್ಷ ಪಾಲಿಕೆ ಚುಕ್ಕಾಣಿ ಹಿಡಿಯುವುದು ಖಚಿತ. ಮೇಯರ್-ಉಪ ಮೇಯರ್ ಮೀಸಲಾತಿ ಪ್ರಕಟಗೊಂಡ ಆನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ತಮಗೇ ಬೆಂಬಲ ನೀಡುವಂತೆ ಜೆಡಿಎಸ್ ಮುಖಂಡರೊಂದಿಗೆ ಹಲವಾರು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರಾದರೂ, ಇದುವರೆಗೆ ಯಾವುದೇ ಅಧಿಕೃತ ಹೊಂದಾಣಿಕೆ ಸಭೆ ನಡೆದಿಲ್ಲ. ಇನ್ನೂ ಜೆಡಿಎಸ್ ಮುಖಂಡರು ತಮಗೆ ಅನುಕೂಲ ಒದಗಿಸುವ ಪಕ್ಷಗಳಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ. 33 ಸ್ಥಾನ ಹೊಂದಿರುವ ಬಿಜೆಪಿ, 24ನೇ ವಾರ್ಡಿನ ಪಕ್ಷೇತರ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಬೆಂಬಲದಿಂದ 34 ಸ್ಥಾನಗಳನ್ನು ಪಡೆದಿದೆ. ಇದರೊಂದಿಗೆ ಬಿಜೆಪಿಯ ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ ಹಾಗೂ ಅರವಿಂದ ಬೆಲ್ಲದ ಮತಗಳಿಂದ ಒಟ್ಟು 37 ಸ್ಥಾನ್ನ ಪಡೆದುಕೊಳ್ಳುತ್ತದೆ. 22 ಸದಸ್ಯರನ್ನ್ನು ಹೊಂದಿರುವ ಕಾಂಗ್ರೆಸ್ಗೆ 50ನೇ ವಾರ್ಡ್ನ ಕೆಜೆಪಿ ಸದಸ್ಯೆ ಲಕ್ಷ್ಮೀಬಾಯಿ ಬಿಜವಾಡ ಬೆಂಬಲ ಬಹುತೇಕ ನಿಶ್ಚಿತವೆಂದೇ ಹೇಳಲಾಗುತ್ತಿದೆ. ಇದರೊಂದಿಗೆ ಕಾಂಗ್ರೆಸ್ ಶಾಸಕರಾದ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಮತಗಳಿಂದ 28 ಸ್ಥಾನ ಪಡೆಯಲಿದೆ.
9 ಸದಸ್ಯರಿರುವ ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದರೆ, ಬಿಜೆಪಿ 46 ಸದಸ್ಯರ ಬಲ ಹೊಂದಲಿದೆ. ಜೆಡಿಎಸ್ ಕಾಂಗ್ರೆಸ್ಗೆ ಬೆಂಬಲ ನೀಡಿದರೆ, ಕಾಂಗ್ರೆಸ್ ಬಲ 37ಕ್ಕೆ ತಲುಪಲಿದೆ. ಆಗ ಬಿಜೆಪಿ ಹಾಗೂ ಕಾಂಗ್ರೆಸ್ನ 37 ಸಂಖ್ಯೆಗೆ ತಟಸ್ಥಗೊಳ್ಳಲಿದ್ದು, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಾದ 63ನೇ ವಾರ್ಡಿನ ಮಕ್ತುಮಸಾಬ ಯರಗಟ್ಟಿ ಬೆಂಬಲ ನೀಡುವ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಜೆಡಿಎಸ್ ಬೆಂಬಲ ಬಿಜೆಪಿಗೆ ದೊರೆತಲ್ಲಿ ಪಕ್ಷೇತರ ಅಭ್ಯರ್ಥಿ ಯರಗಟ್ಟಿಯ ಸಹಾಯಕ್ಕಾಗಿ ಪ್ರಯತ್ನಿಸುವ ಅವಶ್ಯಕತೆ ಬಿಜೆಪಿಗೆ ಬರುವುದೇ ಇಲ್ಲ. ಒಂದು ವೇಳೆ ಜೆಡಿಎಸ್ ಬೆಂಬಲ ಕಾಂಗ್ರೆಸ್ಗೆ ದೊರೆತಲ್ಲಿ ಪಕ್ಷೇತರ ಅಭ್ಯರ್ಥಿ ಯರಗಟ್ಟಿ ಸಹಕಾರ ಅಗತ್ಯ. ಆಗ ಪಕ್ಷೇತರ ಅಭ್ಯರ್ಥಿ ಯರಗಟ್ಟಿಯ ಬೇಡಿಕೆಗಳ ಈಡೇರಿಕೆಗೆ ಎರಡೂ ಪಕ್ಷಗಳ ಮುಖಂಡರಲ್ಲಿ ಸ್ಪರ್ಧೆ ಏರ್ಪಡುವುದರಲ್ಲಿ ಶಂಕೆಯೇ ಇಲ್ಲ.
- ಆನಂದ ಅಂಗಡಿ