ಅಕ್ರಮ ಅದಿರು ರಫ್ತು ತನಿಖೆಗೆ ಹಿರೇಮಠ ಸ್ವಾಗತ
ಹುಬ್ಬಳ್ಳಿ: ಏಳು ಬಂದರುಗಳಿಂದ ಅಕ್ರಮವಾಗಿ ಅದಿರು ರಫ್ತು ಸಾಗಿಸಿರುವುದನ್ನು ಸಿಬಿಐ ತನಿಖೆಗೆ ಒಳಪಡಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿರುವ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ, ಆಂತರಿಕವಾಗಿಯೂ ಬಳಕೆಯಾಗಿರುವ ಅದಿರಿನ ಪ್ರಮಾಣ ಪತ್ತೆ ಹಚ್ಚುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2001-06ರವರೆಗೆ ರಾಜ್ಯದಲ್ಲಿ ಅಂದಾಜು 184.05 ಮಿಲಿಯನ್ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ಹೊರ ತೆಗೆಯಲಾಗಿದ್ದು, ಅದರಲ್ಲಿ 90.76 ಮಿಲಿಯನ್ ಮೆಟ್ರಿಕ್ ಟನ್ ಅದಿರು ರಫ್ತಾಗಿದ್ದರೆ, 87.39 ಮಿಲಿಯನ್ ಮೆಟ್ರಿಕ್ ಟನ್ ಅದಿರನ್ನು ಅಂತರಿಕವಾಗಿ ಬಳಕೆ ಮಾಡಲಾಗಿದೆ ಎಂದು ಲೋಕಾಯುಕ್ತರು ನೀಡಿರುವ ಪ್ರಥಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಕ್ರಮವಾಗಿ ಹೊರತೆಗೆಯಲಾದ ಅದಿರನ್ನು ಅಂತರಿಕವಾಗಿಯೂ ಬಳಸಿರುವ ಹಿನ್ನೆಲೆಯಲ್ಲಿ ಕೇವಲ ರಫ್ತಾಗಿರುವ ಅದಿರನ್ನು ಮಾತ್ರ ಪತ್ತೆ ಹಚ್ಚುವುದರಿಂದ ತನಿಖೆಗೆ ತಾರ್ಕಿಕ ಅಂತ್ಯ ದೊರೆಯುವುದಿಲ್ಲ. ಆದ್ದರಿಂದ ಅಂತರಿಕವಾಗಿ ಬಳಕೆಯಾಗಿರುವ ಅದಿರನ್ನು ಕೂಡ ಪತ್ತೆ ಹಚ್ಚಬೇಕು ಎಂದು ಹೇಳಿದರು.
ಬಿಜೆಪಿಗೆ ನೈತಿಕ ಹಕ್ಕಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಮಾಡಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಹಿರೇಮಠ, ಬೇರೆಯವರ ಅಕ್ರಮ ಗಣಿಗಾರಿಕೆ ಮಾತನಾಡುವುದಕ್ಕೆ ಬಿಜೆಪಿಗೆ ನೈತಿಕ ಹಕ್ಕಿಲ್ಲ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿದ ಸಂಗತಿಯನ್ನು ಬಿಜೆಪಿ ನಾಯಕರು ಮರೆಯಬಾರದು ಎಂದರು.
ಜನಸಂಗ್ರಾಮ ಪರಿಷತ್‌ನ ರಾಘವೇಂದ್ರ ಕುಷ್ಟಗಿ ಮತ್ತಿತರರಿದ್ದರು.