ಕಳೆಗುಂದಿದ ಯುವಜನೋತ್ಸವ
ಧಾರವಾಡ: ಕರ್ನಾಟಕ ವಿವಿಯಲ್ಲಿ ಈ ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ಯುವ ಜನೋತ್ಸವದ ಹುಮ್ಮಸ್ಸು ಈಗಿಲ್ಲ. ವರ್ಷದಿಂದ ವರ್ಷಕ್ಕೆ ಯುವ ಜನೋತ್ಸವದ ಸಂಭ್ರಮ ಕ್ಷೀಣಿಸುತ್ತಿದ್ದು, ಗುರುವಾರ ನಡೆದ 5ನೇ ವಲಯ ಮಟ್ಟದ ಯುವ ಜನೋತ್ಸವವಂತೂ ತೀರಾ ಸಪ್ಪೆಯಾಗಿತ್ತು.
ಕವಿವಿ ವ್ಯಾಪ್ತಿಯ ಹಾವೇರಿ, ಗದಗ, ಕಾರವಾರ ಹಾಗೂ ಧಾರವಾಡದ ಸ್ನಾತಕೋತ್ತರ ಕೇಂದ್ರಗಳಿಂದ ಬರೀ 150 ವಿದ್ಯಾರ್ಥಿಗಳು ಯುವ ಜನೋತ್ಸವದಲ್ಲಿ ಭಾಗವಹಿಸಿದ್ದರು. ಕವಿವಿಯ ಸೆನೆಟ್ ಹಾಲ್, ಗಾಂಧಿಭವನ, ಕನ್ನಡ ಸಭಾಭವನ, ಅಂಬೇಡ್ಕರ್ ಭವನ, ಮಾನವಶಾಸ್ತ್ರ ಸಭಾಭವನ ಹಾಗೂ ಜಿಮಖಾನ ಭವನದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಸೇರಿದಂತೆ ನಡೆದ 23 ಸ್ಪರ್ಧೆಗಳಲ್ಲಿ ಭಾಗವಹಿಸಿದ ಹೆಚ್ಚಾನು ವಿದ್ಯಾರ್ಥಿಗಳಿಗೆ ಅಷ್ಟೇನೂ ಆಸಕ್ತಿ ಕಂಡುಬರಲಿಲ್ಲ. ಸೆಮಿಸ್ಟರ್ ಪದ್ದತಿ ಬಂದಾಗಿನಿಂದಲೂ ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿಲ್ಲ. ಅಲ್ಲದೆ, ವಿವಿಯ ಆಸಕ್ತಿಯೂ ಅಷ್ಟಕಷ್ಟೇ ಎಂದು ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.
ಸ್ಪಂದಿಸದ ಸಂಯೋಜಕರು: ಇನ್ನು, ಗಾಂಧಿಭವನದಲ್ಲಿ ನಡೆದ ಶಾಸ್ತ್ರೀಯ, ಜಾನಪದ ಇನ್ನಿತರೆ ಸಂಗೀತ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಪತ್ರಕರ್ತರು ಮಾಹಿತಿ ಕೇಳ ಬಯಸಿದರೆ ಸಂಯೋಜಕ ಡಾ.ಎಸ್.ವಿ. ಶೆಟ್ಟರ್ ಅವರು, ಈಗ ಆಗ ಎಂದು ಕಾಣೆಯಾದರು. ಇದಲ್ಲದೇ, ವಿವಿಧ ವಿಭಾಗಗಳಲ್ಲಿ ನಡೆದ ಸಮಾರಂಭಗಳ ಬಗ್ಗೆ ಸಂಯೋಜಕರು ಸ್ಪಂದಿಸಲಿಲ್ಲ. ಎಲ್ಲ ಸಂಯೋಜಕರು ತಮ್ಮ ತಮ್ಮ ಗದ್ದಲದಲ್ಲಿ ಮುಳುಗಿದ್ದರೆ ಹೊರತು ಯಾವ ವಿದ್ಯಾರ್ಥಿ ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆಂದು ಅವರಿಗೆ ಗೊತ್ತಿರದಿರುವುದು ಬೇಸರದ ಸಂಗತಿ.
ಬರೀ ಶೈಕ್ಷಣಿಕ ಮಾತ್ರವಲ್ಲದೇ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ವಿವಿ ರಾಜ್ಯದಲ್ಲಿ ಹೆಸರು ಮಾಡಬೇಕೆನ್ನುವುದನ್ನು ವಿವಿಯ ಕುಲಪತಿ ಡಾ.ಎಚ್.ಬಿ. ವಾಲೀಕಾರ, ಕುಲಸಚಿವ ಚಂದ್ರಮಾ ಕಣಗಲಿ ಅವರ ಆಶಯ. ಈ ರೀತಿ ಯುವಜನೋತ್ಸವಗಳು ಬೇಕಾಬಿಟ್ಟಿ ನಡೆದರೆ ಏನು ಪ್ರಯೋಜನ ಎನ್ನುವುದು ಹಲವರ ಅಭಿಪ್ರಾಯ.
ಏನೇನು ಕಾರ್ಯಕ್ರಮಗಳು: ಕನ್ನಡ ಸಭಾವನದಲ್ಲಿ ನಡೆದ ಮಿಮಿಕ್ರಿಯಲ್ಲಿ ಮಾಣಿಕ ನಿಂಬಾಳಕರ, ಮೇಘರಾಜ ಪಾಟೀಲ, ಸೌಜನ್ಯಾ ಉಳ್ಳಾಗಡ್ಡಿ, ಭೀಮನಗೌಡ ಪಾಟೀಲ ಗಮನ ಸೆಳೆದರು. ಇವರು ಮಿಮಿಕ್ರಿ ಪ್ರೇಕ್ಷಕರನ್ನು ಹಾಸ್ಯದಲ್ಲಿ ತೇಲಿಸಿತು. ಇದೇ ಸಭಾಭವನದಲ್ಲಿ ನಡೆದ ಸ್ಕಿಟ್ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು. ಗಾಂಧಿಭವನದಲ್ಲಿ ನಡೆದ ಡೊಳ್ಳು ಕುಣಿತ, ಬುಡಕಟ್ಟು ಜಾನಪದ ನೃತ್ಯ ಹಾಗೂ ಜಾನಪದ ನೃತ್ಯಗಳು ಗಮನ ಸೆಳೆದವು.
ಹಾಗೆಯೆ, ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಚಿತ್ರಕಲೆ, ರಂಗೋಲಿ ಸ್ಪರ್ಧೆಗಳಲ್ಲಿ ವಿಭಿನ್ನ ರೀತಿಯ ಚಿತ್ರ ಹಾಗೂ ರಂಗೋಲಿ ಕಂಡುಬಂದವು. ಅದರಲ್ಲೂ ಸ್ಥಳದಲ್ಲಿಯೇ ಚಿತ್ರಕಲೆ ಸ್ಪರ್ಧೆಯಂತೂ ವಿದ್ಯಾರ್ಥಿಗಳು ಚಿತ್ರಿಸಿದ ಚಿತ್ರಗಳು ಗಮನ ಸೆಳೆದವು.
ಮಾನವಶಾಸ್ತ್ರ ಸಭಾಭನದಲ್ಲಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಒರೆಗೆ ಹಚ್ಚಿದರು.