ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದೇಶಾಭಿವೃದ್ಧಿಗೆ ಮೋದಿ ಪ್ರಧಾನಿಯಾಗ್ಬೇಕು

Lingaraj Badiger
Updated On : 25 Oct 2013, 10:56 am

ಹುಬ್ಬಳ್ಳಿ: ಭಯೋತ್ಪಾದನೆ ಹಾಗೂ ಬೆಲೆ ಏರಿಕೆ ಮುಕ್ತತೆ ಜೊತೆಗೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶವನ್ನು ಅಧೋಗತಿಗೆ ಇಳಿಸಿದೆ. ಯುಪಿಎ ಸರ್ಕಾರದ ಆಡಳಿತ ವೈಖರಿಯಿಂದ ದೇಶದ ಭದ್ರತೆ ಆತಂಕಕ್ಕೀಡಾಗಿದೆಯಲ್ಲದೇ, ವಿಶ್ವಮಟದಲ್ಲಿ ದೇಶ ತಲೆತಗ್ಗಿಸುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ ಕಾರ್ಯಕರ್ತರು ಈಗಿನಿಂದಲೇ ಪ್ರಯತ್ನಿಸಬೇಕು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನ. 17ಕ್ಕೆ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಈ ರ್ಯಾಲಿಯಲ್ಲಿ ಹುಬ್ಬಳ್ಳಿ-ಧಾರವಾಡದ ಪ್ರತಿ ಬೂತ್‌ನಿಂದ ಕನಿಷ್ಠ 25 ಜನರು ಪಾಲ್ಗೊಳ್ಳಬೇಕು ಎಂದರು. ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನಡೆಸಿದೆ. ಆ ಸಂದರ್ಭ ಕೆಲ ತಪ್ಪುಗಳು ನಡೆದಿದ್ದರೂ, ಜನಹಿತ ಕಾರ್ಯ ಮಾಡುವಲ್ಲಿ ಬಿಜೆಪಿ ಸರ್ಕಾರ ಸಫಲಗೊಂಡಿತ್ತು. ತಪ್ಪು ಮಾಡಿದವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ. ಆದರೂ ಬಿಜೆಪಿ ತನ್ನ ತತ್ವ-ಸಿದ್ಧಾಂತ ಪಾಲಿಸಿಕೊಂಡು ಬಂದಿತ್ತು. ಇದೀಗ ಮತ್ತೆ ಬಿಜೆಪಿಯ ತತ್ವ-ಸಿದ್ಧಾಂತಗಳನ್ನು ಪ್ರಚಾರಗೊಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ.
ಜನಹಿತ ಗಾಳಿಗೆ ತೂರಿದ ಕಾಂಗ್ರೆಸ್; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜನಹಿತವನ್ನು ಗಾಳಿಗೆ ತೂರಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮೂಲ ಕಾಂಗ್ರೆಸ್ಸಿಗರು ಒಪ್ಪುತ್ತಿಲ್ಲ. ಇದರ ಪರಿಣಾಮ ಆಡಳಿತದ ಮೇಲೆ ಬೀರುತ್ತಿದೆ. ಯಾವುದೇ ಪೂರ್ವಾಪರ ಸಿದ್ಧತೆಗಳಿಲ್ಲದೇ ಕೇವಲ ಪ್ರಚಾರದ ಉದ್ದೇಶ ಘೋಷಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇತರ ಯೋಜನೆಗಳು ಯಶಸ್ವಿಯಾಗಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಹೆಸರಿನಲ್ಲಿ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಟೀಕಿಸಿದರು.
ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ಅಧಿಕಾರದಲ್ಲಿ ಇರಲಿ ಅಥವಾ ಇರದೇ ಇರಲಿ ಪಕ್ಷದ ಚಟುವಟಿಕೆ ಸದಾ ನಡೆಯುತ್ತಿರುತ್ತವೆ. ಆದರೆ ಬೇರೆ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇರದೇ ಇರುವಾಗ ಮಾತ್ರ ಕಾರ್ಯಕರ್ತರ ಸಮಾವೇಶ ಮತ್ತಿತರ ಚಟುವಟಿಕೆಯಲ್ಲಿ ತೊಡಗಿರುತ್ತವೆ ಎಂದರು. ಅ. 30ರಿಂದ ಮತದಾರರ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಬೇಕು.
ಬೆಂಗಳೂರಿನಲ್ಲಿ ನ. 17ರಂದು ನಡೆಯಲಿರುವ ರ್ಯಾಲಿಯಲ್ಲಿ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರು ರ್ಯಾಲಿ ಹಿನ್ನಲೆಯಲ್ಲಿ ನ. 7ರಿಂದ ಬಿಜೆಪಿ ಶಕ್ತಿ ಕೇಂದ್ರಗಳಲ್ಲಿ ಪ್ರಚಾರ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ರಂಗಾ ಬದ್ದಿ, ಡಾ. ಮೋಹಸಿನ್, ನಾಗೇಶ ಕಲಬುರ್ಗಿ, ಸತೀಶ ಶೇಜವಾಡಕರ, ಉಮಾ ಅಕ್ಕೂರ, ಕೃಷ್ಣಾ ಗಂಡಗಾಳೇಕರ ಮತ್ತಿತರರು ಉಪಸ್ಥಿತರಿದ್ದರು.

ಸಚಿವ ಲಾಡ್ ಉಳಿಸಿಕೊಳ್ಳಲು ವಿಫಲ ಯತ್ನ: ಕಾಗೇರಿ ಬೇಸರ
ಧಾರವಾಡ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ಅವರ ವಿರುದ್ದ ಸೂಕ್ತ ದಾಖಲೆಗಳಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿ ಅವರನ್ನು ಉಳಿಸಿಕೊಳ್ಳುವ ಯತ್ನ ಸರಿಯಲ್ಲ ಎಂದು ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಕಾಗೇರಿ ಹೇಳಿದ್ದಾರೆ.
ಇಲ್ಲಿನ ನೌಕರರ ಭವನದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಭೂತಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಲಾಡ್ ಅವರ ಅಕ್ರಮ ಗಣಿಗಾರಿಕೆಯಲ್ಲಿನ ಪಾಲಿನ ಬಗ್ಗೆ ಡಾ.ಎಸ್.ಆರ್. ಹಿರೇಮಠ ಅವರು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಸೂಕ್ತ ದಾಖಲೆಗಳನ್ನು ಒಪ್ಪಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಲಾಡ್ ಅವರನ್ನು ಒಂದು ತಿಂಗಳಿಂದ ಕಾಯ್ದುಕೊಳ್ಳುತ್ತಿರುವುದು ಸಂಶಯಕ್ಕೆ ಈಡು ಮಾಡಿದೆ. ಈ ಪ್ರಕರಣದ ಬಗ್ಗೆ ಸುಖಾಸುಮ್ಮನೆ ಸಮಯ ವ್ಯರ್ಥವಾಗುತ್ತಿದ್ದು, ಮುಖ್ಯಮಂತ್ರಿಗಳು ಉತ್ತಮ ಆಡಳಿತ ನೀಡುವ ಕುರಿತು ಚಿಂತನೆ ಮಾಡುವುದನ್ನು ಬಿಟ್ಟು ಬರೀ ಲಾಡ್ ಅವರನ್ನು ಉಳಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ ಎಂದು ಕಾಗೇರಿ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement