ಧಾರವಾಡಕ್ಕೆ ದೂರವಾದ ಪೂರ್ಣ ದರ್ಶನ
ಧಾರವಾಡ: ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರು, ಹಿರಿಯ ಸಾಹಿತಿ-ವಿದ್ವಾಂಸರು, ರಂಗ ಕಲಾವಿದರು ಹಾಗೂ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಜಾಲ ಹೊಂದಿರುವ ಧಾರವಾಡದಲ್ಲಿ 30 ವರ್ಷಗಳ ಹಿಂದೆಯೇ ಸ್ಥಾಪನೆಯಾದ ದೂರದರ್ಶನ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಹೌದು...ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜನತೆಯ ಪ್ರತಿಭೆಗೆ ಸೂಕ್ತ ವೇದಿಕೆಯಾಗಬೇಕಿದ್ದ ಇಲ್ಲಿನ ದೂರದರ್ಶನ ಕೇಂದ್ರದ ಮೇಲ್ದರ್ಜೆಗೆ ಏರಿಸುವ ದಶಕಗಳ ಕನಸು ಇನ್ನು ನನಸಾಗಿಲ್ಲ. ಹೀಗಾಗಿ ದೂರದ ದೆಹಲಿ, ಬೆಂಗಳೂರು ಹಾಗೂ ಗುಲ್ಬರ್ಗ ಕೇಂದ್ರಗಳಲ್ಲಿ ನಿರ್ಮಾಣಗೊಂಡ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುವುದರಲ್ಲಿ ಈ ಕೇಂದ್ರ ತೃಪ್ತಿ ಪಟ್ಟುಕೊಳ್ಳಬೇಕಿದೆ.
ಈ ಕೇಂದ್ರಕ್ಕೂ ಬೆಂಗಳೂರು ಕೇಂದ್ರಗಳಿಗೆ ನೀಡಿರುವ ಕಾರ್ಯಕ್ರಮ ನಿರ್ಮಾಣ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಬೇಕೆಂದು ಇಲ್ಲಿನ ಬುದ್ಧಿಜೀವಿಗಳಾದ ನಾಡೋಜ ಚನ್ನವೀರ ಕಣವಿ, ನಾಡೋಜ ಪಾಟೀಲ ಪುಟ್ಟಪ್ಪ, ಗಿರಡ್ಡಿ ಗೋವಿಂದರಾಜ ಮತ್ತಿತರರು ಅನೇಕ ವರ್ಷಗಳಿಂದ ಧರಣಿ, ಪ್ರತಿಭಟನೆ ನಡೆಸಿ ಸರ್ಕಾರ ಎಚ್ಚರಿಸಿದ್ದಾರೆ. ಅಲ್ಲದೆ, ಹತ್ತು ವರ್ಷಗಳ ಹಿಂದೆಯೇ ಪೂರ್ಣ ಪ್ರಮಾಣದ ದೂರದರ್ಶನ ಕೇಂದ್ರ ಸ್ಥಾಪನಾ ಹೋರಾಟ ಸಮಿತಿಯೂ ಇಲ್ಲಿ ಜನ್ಮ ತಳಿದಿತ್ತು. ಆದರೆ, ಇದಾವುದಕ್ಕೂ ಸರ್ಕಾರ ಮಾತ್ರ ಸ್ಪಂದಿಸದಿರುವುದು ಈ ಭಾಗದ ಜನತೆಯ ದೊಡ್ಡ ಕೊರಗು.
ಹಲವು ವರ್ಷಗಳ ಬೇಡಿಕೆ: ಪೂರ್ಣ ಪ್ರಮಾಣದ ಕೇಂದ್ರ ಒದಗಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಿದ್ದು, ಈ ಕುರಿತು ಯಾವುದೇ ಬೆಳವಣಿಗೆಗಳು ಆಗುತ್ತಿಲ್ಲ. ಸ್ವತಃ ಕಾರ್ಯಕ್ರಮ ನಿರ್ಮಾಣ ಮಾಡಿಕೊಳ್ಳುವ ಎಲ್ಲ ಅರ್ಹತೆಯನ್ನು ಈ ಕೇಂದ್ರ ಹೊಂದಿದ್ದರೂ ಈಗ ಸೆಟಲೈಟ್ ಮೂಲಕವೇ ಕಾರ್ಯಕ್ರಮ ಮರು ಪ್ರಸಾರ ಮಾಡಲಾಗುತ್ತಿದೆ. ಈ ಕುರಿತಂತೆ ರಾಜಕೀಯ ಮಟ್ಟದಲ್ಲಿ ತೀರ್ಮಾನವಾಗಬೇಕೆನ್ನುವುದು ಧಾರವಾಡ ದೂರದರ್ಶನ ಕೇಂದ್ರದ ವ್ಯವಸ್ಥಾಪಕ ಸುಭಾಸ ಅವರ ಹೇಳಿಕೆ.
100 ವ್ಯಾಟ್ಸ್ ಶಕ್ತಿಯ ಟ್ರಾನ್ಸ್‌ಮೀಟರ್‌ನೊಂದಿಗೆ 1984ರಲ್ಲಿ ಧಾರವಾಡದಲ್ಲಿ ಆರಂಭವಾದ ದೂರದರ್ಶನ ಮರು ಪ್ರಸಾರದ ಈ ಕೇಂದ್ರ, ಪ್ರಸ್ತುತ 200 ಕಿಲೋ ವ್ಯಾಟ್ಸ್ ಟ್ರಾನ್ಸ್‌ಮೀಟರ್ ಹೊಂದಿದೆ. ಪೂರ್ಣ ಪ್ರಮಾಣದ ಕೇಂದ್ರ ಹೊಂದುವ ಎಲ್ಲ ಲಕ್ಷಣಗಳನ್ನು ಹೊಂದಿರುವ ಈ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಸುಸಜ್ಜಿತ ಸ್ಟುಡಿಯೋ, ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣದ ಸೌಲಭ್ಯ ಕಲ್ಪಿಸಬೇಕಿದೆ. ಅಲ್ಲದೆ, ಧ್ವನಿ ಮುದ್ರಣ ಸಾಧನಗಳನ್ನು ಒದಗಿಸುವ ಕೆಲಸವಾಗಬೇಕಿದೆ. ಇಲ್ಲಿನ ಕೃಷಿ ವಿವಿ ಸಂಶೋಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿವೆ. ಆದರೆ, ಆ ಸಂಶೋಧನೆಗಳಿಗೆ ಸಿಗಬೇಕಾದ ಪ್ರಚಾರ ಸಿಗುತ್ತಿಲ್ಲ.
ಉ-ಕದ ಕಲೆ ಹಾಗೂ ಸಂಸ್ಕೃತಿಗೆ ದೂರದರ್ಶನದಲ್ಲಿ ಪ್ರಸ್ತುತ ಅಷ್ಟೊಂದು ಆದ್ಯತೆ ದೊರೆಯುತ್ತಿಲ್ಲ. ಸಿಕ್ಕರೂ ಕಲಾವಿದರಿಗೆ ಬೆಂಗಳೂರು ಈ ಭಾಗದಿಂದ ಸುಮಾರು 500 ಕಿ.ಮೀ ದೂರದ ದಾರಿ. ಖಾಸಗಿ ವಾಹಿನಿಗಳು ಎಲ್ಲವೂ ಬೆಂಗಳೂರು ಕೇಂದ್ರೀಕೃತವಾಗಿದ್ದು, ಬೆಂಗಳೂರಿನಿಂದ ಪ್ರಸಾರವಾಗುವ ವಾರ್ತೆಗಳಲ್ಲಿ ಈ ಭಾಗದ ರಾಜಕೀಯ, ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಅಷ್ಟೊಂದು ಪ್ರಾಶಸ್ತ್ಯ ನೀಡಲಾಗುತ್ತಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಕೇಂದ್ರ ಅಗತ್ಯ ಎನ್ನುವುದು ಈ ಬಗ್ಗೆ ಹೋರಾಟ ಮಾಡಿದ್ದ ಖ್ಯಾತ ತಬಲಾ ವಾದಕ ಪಂ. ರಘುನಾಥ ನಾಕೋಡ ಅವರ ಒತ್ತಾಯ.
ಕೃಷಿ, ತೋಟಗಾರಿಗೆ, ಮೀನುಗಾರಿಕೆ, ಸುಮಾರು 400 ಕಿ.ಮೀ. ವ್ಯಾಪ್ತಿಯ ಕರಾವಳಿ ಈ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಧಾರವಾಡದಲ್ಲಿ ಆಕಾಶವಾಣಿ ಕೇಂದ್ರ, ಕಾನೂನು ವಿವಿ, ಕರ್ನಾಟಕ ವಿವಿ, ಎಸ್‌ಡಿಎಂ ವೈದ್ಯಕೀಯ, ಡೆಂಟಲ್, ಕೃಷಿ ವಿವಿ ಹೊಂದಿದೆ. ಇತ್ತೀಚೆಗೆ ಹೈಕೋರ್ಟ್ ಕಾಯಂ ಪೀಠವೂ ಆಗಿದೆ. ವಾಣಿಜ್ಯ ಕೇಂದ್ರ ಹುಬ್ಬಳ್ಳಿ, ಪಕ್ಕದ ಹಾವೇರಿಯಲ್ಲಿ ಜಾನಪದ ವಿವಿ, ಬೆಳಗಾವಿಯಲ್ಲಿ ರಾಣಿ ಚನ್ನಮ್ಮ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕೆಎಲ್‌ಇ ಸಂಸ್ಥೆ, ಬಿಜಾಪುರದಲ್ಲಿ ಏಕೈಕ ಮಹಿಳಾ ವಿವಿ ಇದೆ. ಅಲ್ಲದೆ, ಉ-ಕದಲ್ಲಿ ವಿಶಿಷ್ಟ ಜಾನಪದ ಕಲಾ ಸಂಪತ್ತಿದೆ. ಬೆಂಗಳೂರು ದೂರದರ್ಶನಕ್ಕಿಂತ ಉತ್ಕೃಷ್ಟ ಕಾರ್ಯಕ್ರಮ ನಿರ್ಮಾಣ ಮಾಡುವಷ್ಟು ಸಂಪತ್ತು ಹಾಗೂ ವ್ಯಾಪ್ತಿ ಪ್ರದೇಶ ಇಲ್ಲಿದ್ದು, ಈ ಕೇಂದ್ರದಿಂದ 500-600 ಜನರಿಗೆ ಉದ್ಯೋಗವೂ ದೊರೆಯುತ್ತದೆ. ಈ ಭಾಗದ ಕಲಾವಿದರಿಗೂ ಉತ್ತಮ ವೇದಿಕೆ ದೊರೆಯುತ್ತದೆ. ಇಷ್ಟಾಗಿಯೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ ಬೇಡಿಕೆ ಈಡೇರುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಸು ಆಸಕ್ತಿ ವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಪೂರ್ಣ ಪ್ರಮಾಣದ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಬೇಕಿದೆ.
-ಬಸವರಾಜ ಹಿರೇಮಠ/ಕಲ್ಮೇಶ ಪಟ್ಟಣದವರ