ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಚಿವರ ಕಾಟಾಚಾರದ ಭೇಟಿ...

Lingaraj Badiger
Updated On : 25 Oct 2013, 10:49 am

ಹುಬ್ಬಳ್ಳಿ: ಕಿತ್ತೂರು ಉತ್ಸವಕ್ಕೆ ಆಗಮಿಸಿದ್ದ ವಸತಿ ಸಚಿವ ಅಂಬರೀಷ್, ಗುರುವಾರ ಹುಬ್ಬಳ್ಳಿ ನಗರಕ್ಕೆ ಕಾಟಾಚಾರಕ್ಕೆಂಬಂತೆ ಭೇಟಿ ನೀಡಿದರು.
ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ್ದ ವಸತಿ ಸಚಿವ ಅಂಬರೀಷ್ ಅವರು, ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ಆಹ್ವಾನದ ಮೇರೆಗೆ ಮಂಟೂರ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಶ್ರಯ ಮನೆ ಕಾಲೋನಿ ಜಾಗಕ್ಕೆ ಭೇಟಿ ನೀಡಬೇಕಿತ್ತು. ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಭೇಟಿ ನೀಡಿದ ಸಚಿವ ಅಂಬರೀಷ್ ಒಂದು ಕ್ಷಣ ಕೂಡ ಯೋಜನಾ ಪ್ರದೇಶ ಪರಿಶೀಲಿಸಲಿಲ್ಲ. 'ಬಂದ ಅಂಬಿ ಹೋದ ಅಂಬಿ' ಎನ್ನುವಂತೆ ಇನ್ನೊವಾ ಕಾರು ಬಿಟ್ಟು ಇಳಿಯದೇ ನಾನು ದಾವಣಗೆರೆಗೆ ಹೋಗಬೇಕು. ಒತ್ತಾಯ ಮಾಡಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ನನಗೀಗ ಪುರಸೊತ್ತಿಲ್ಲ ಏನೂ ಮಾತನಾಡುವುದಿಲ್ಲ ಎನ್ನುತ್ತಲೇ ಮಾಧ್ಯಮದವರನ್ನು ಸಾಗ ಹಾಕಿದರು.
ಇದಕ್ಕೂ ಮೊದಲು ಶಾಸಕ ಪ್ರಸಾದ ಅಬ್ಬಯ್ಯ ಅವರ ಕಚೇರಿಗೆ ಆಗಮಿಸಿದ ಸಚಿವ ಅಂಬರೀಷ್ ಅಲ್ಲೂ ಕೂಡ ಹೆಚ್ಚು ಸಮಯ ಕಳೆಯಲಿಲ್ಲ. ಶಾಸ್ತ್ರಕ್ಕೆ ಎನ್ನುವಂತೆ ಕಚೇರಿಗೆ ಆಗಮಿಸಿದ ಅವರು, ಒಂದೈದು ನಿಮಿಷ ಕೂಡ ಕಚೇರಿಯೊಳಗೆ ನಿಲ್ಲದೆ, ಅಲ್ಲಿಂದ ನೇರವಾಗಿ ಮಂಟೂರ ರಸ್ತೆಗೆ ಬಂದು ಕಾರಿನಲ್ಲಿ ಕುಳಿತು ಯೋಜನಾ ಪ್ರದೇಶ ನೋಡಿ, ಎಲ್ಲ ವಿವರ ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಅಧಿಕಾರಿಗಳೊಂದಿಗೆ ಮಾತನಾಡಿ ಯೋಜನೆ ಕೈಗೆತ್ತಿಕೊಳ್ಳುವಾ ಎಂದು ಶಾಸಕ ಅಬ್ಬಯ್ಯ ಅವರಿಗೆ ಹೇಳಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು.
ರಾಜೀವ ಆವಾಸ್ ಯೋಜನೆಯಡಿ ಕಾಮಗಾರಿ: ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಸಚಿವರಾಗಿದ್ದ ಸಂದರ್ಭ ಸರ್ಕಾರ ಖರೀದಿಸಿದ 35 ಎಕರೆ ಜಾಗದಲ್ಲಿ ಆಶ್ರಯ ಮನೆ ನಿರ್ಮಿಸುವುದಕ್ಕೆ ಯೋಜನೆ ರೂಪಿಸಲಾಗಿದ್ದು, ವಸತಿ ಸಚಿವ ಅಂಬರೀಷ್‌ರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ರಾಜೀವ್ ಆವಾಸ್ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಜಿ೤2 ಮಾದರಿಯಲ್ಲಿ 35 ಎಕರೆಯಲ್ಲಿ ಒಟ್ಟು 3500 ಆಶ್ರಯ ಮನೆ ನಿರ್ಮಿಸಲಾಗುವುದು. ಕೇಂದ್ರದ ರಾಜೀವ್ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡರೆ ತಲಾ ಒಂದು ಮನೆಯನ್ನು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಕೇಂದ್ರ ಸರ್ಕಾರ ಮನೆ ನಿರ್ಮಾಣದ ಒಟ್ಟು ವೆಚ್ಚದಲ್ಲಿ ಶೇ. 50ರಷ್ಟು ಭರಿಸಲಿದ್ದು, ರಾಜ್ಯ ಸರ್ಕಾರ ಶೇ. 40ರಷ್ಟು ಮತ್ತು ಶೇ. 10ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ರಾಜೀವ್ ಆವಾಸ್ ಯೋಜನೆಯಡಿ ಆಶ್ರಯ ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡರೆ ಆಟದ ಮೈದಾನ, ಅಂಗನವಾಡಿ, ಶಾಲಾ ಕಟ್ಟಡ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲ ಸೌಲಭ್ಯಗಳು ದೊರೆಯಲಿವೆ.
ಆದ್ದರಿಂದ ಕೇಂದ್ರದ ರಾಜೀವ್ ಆವಾಸ್ ಯೋಜನೆಯಡಿ ಮಂಟೂರ ರಸ್ತೆಯಲ್ಲಿನ 35 ಎಕರೆ ಜಾಗದಲ್ಲಿ ಆಶ್ರಯ ಮನೆ ನಿರ್ಮಿಸುವುದಕ್ಕೆ ವಸತಿ ಸಚಿವ ಅಂಬರೀಷ್‌ರೊಂದಿಗೆ ಮಾತುಕತೆ ನಡೆಸಲಾಗಿದ್ದು, ಯೋಜನೆ ಕುರಿತು ಪೂರ್ಣ ವಿವರದೊಂದಿಗೆ ಬೆಂಗಳೂರಿಗೆ ಆಗಮಿಸುವುದಕ್ಕೆ ಸೂಚಿಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement